ರೈತರಿಗೆ ಅಕಾಲಿಕ ಮಳೆ ತಂದ ಆತಂಕ: ರಾಗಿ ಬೆಳೆ ಮೊಳಕೆಯೊಡೆಯುವ ಆತಂಕ ಹೊಲಗಳಲ್ಲಿ ನಿಂತ ನೀರು

14 rama- ragi
Published on

ರಾಮನಗರ :  ಜಿಲ್ಲೆಯಲ್ಲಿ ಹಿಂಗಾರು ಮಳೆ ಅಬ್ಬರಿಸಿದ್ದು, ಮಾಡಿಕೆಗಿಂತ ಹೆಚ್ಚು ಮಳೆ ಆಗಿರುವ ಕಾರಣ ರಾಗಿ ಬೆಳೆ ನಷ್ಟವಾಗುವ ಆತಂಕ ಎದುರಾಗಿದೆ. ಹಲವು ದಿನಗಳಿಂದಲೂ ವಾಯುಭಾರ ಕುಸಿತದಿಂದಾಗಿ ಮಳೆ ಸುರಿಯುತ್ತಿದೆ. ಮೂರ‌್ನಾಲ್ಕು ದಿನಗಳಿಂದ ಎಡೆಬಿಡದೆ ಸುರಿದ ಮಳೆಯಿಂದಾಗಿ ರಾಗಿ ಹೊಲದಲ್ಲಿ ನೀರು ನಿಂತಿದೆ. ತೇವಾಂಶದಿಂದ ತೆನೆಗಳು ಮೊಳಕೆಯೊಡೆಯುವ ಆತಂಕ ರೈತರದ್ದು.

ಜಿಲ್ಲೆಯಲ್ಲಿ ರಾಗಿ ಪ್ರಮುಖ ಬೆಳೆಯಾಗಿದ್ದು, ಈ ವರ್ಷ 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ. ಆಗಸ್ಟ್‌ನಲ್ಲಿ ಮಳೆ ಕೊರತೆಯಿಂದಾಗಿ ಅಲ್ಲಲ್ಲಿ ಬೆಳೆ ಒಣಗಿದ್ದರೂ ನಂತರದಲ್ಲಿ ಉತ್ತಮವಾಗಿ ಮಳೆಯಾದ ಕಾರಣ ಚೇತರಿಸಿಕೊಂಡಿತ್ತು. ಜುಲೈ ಆರಂಭದಲ್ಲಿ ಬಿತ್ತನೆ ಮಾಡಿದ್ದ ರೈತರು ಈಗಾಗಲೇ ಕೊಯ್ಲು ನಡೆಸಿದ್ದಾರೆ. ಈ ನಡುವೆ ಅಕಾಲಿಕ ಮಳೆ ಬಂದೆರಗಿರುವುದು ರೈತರ ಚಿಂತೆಗೆ ಕಾರಣವಾಗಿದೆ. ಆದರೆ ರಾಗಿ ನೆಲಕ್ಕೆ ಒರಗಿದ್ದರೂ ಬೆಳೆಗೆ ಹಾನಿಯಾಗುವ ಸಾಧ್ಯತೆ ಕಡಿಮೆ ಇದ್ದು ರೈತರು ಈ ಬಗ್ಗೆ ಆತಂಕಪಡುವ ಅಗತ್ಯ ಇಲ್ಲ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು ಅಭಯ ನೀಡಿದ್ದಾರೆ.

ಜಿಲ್ಲೆಯಲ್ಲಿ ಅತಿವೃಷ್ಟಿಯ ಆತಂಕ ಇಲ್ಲ. ತೆನೆ ಭಾರ ಹೆಚ್ಚಾಗಿರುವ ಕಾರಣ ಸಹಜವಾಗಿಯೇ ಬೆಳೆ ನೆಲಕ್ಕೆ ಒರಗಿದೆ. ಇನ್ನೂ ಕೆಲವು ದಿನ ಮಳೆ ಮುಂದುವರಿದರೂ ಹಾನಿಯಾಗುವ ಸಾಧ್ಯತೆ ಕಡಿಮೆ. ಉಳಿದಂತೆ ತೊಗರಿ, ಅವರೆ ಕಟಾವಿನ ಹಂತದಲ್ಲಿದ್ದು, ಶೀತ ಹೆಚ್ಚಾದಲ್ಲಿ ಕೀಟಬಾಧೆ ಉಂಟಾಗಬಹುದು. ಆಗ ಔಷಧೋಪಚಾರ ಮಾಡಬೇಕಾಗುತ್ತದೆ ಎನ್ನುವುದು ಕೃಷಿ ಇಲಾಖೆ ಅಧಿಕಾರಿಗಳ ವಾಹಿತಿ. ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಅಲ್ಲಲ್ಲಿ ಟೊಮ್ಯಾಟೊ, ಚನ್ನಪಟ್ಟಣ ತಾಲೂಕಿನ ವಿವಿಧೆಡೆ ವೀಳ್ಯದೆಲೆ ಬೆಳೆಯಲಾಗಿದ್ದು, ಮಳೆ ಹೆಚ್ಚಾದಲ್ಲಿ ಈ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ.

ತಗ್ಗಿದ ಮಳೆ: ವಾಯುಭಾರ ಕುಸಿತದಿಂದಾಗಿ ರಾಮನಗರ ಜಿಲ್ಲೆಯಲ್ಲಿ ಬುಧವಾರ, ಗುರುವಾರ, ಶುಕ್ರವಾರ ಹಾಗೂ ಶನಿವಾರ ಹಗುರ ಮಳೆ ಆಗಿದೆ. ಗುರುವಾರ 18 ಮಿ.ಮೀ. ಸರಾಸರಿ ಮಳೆಯಾಗಿದ್ದು, ಶುಕ್ರವಾರ ಮಳೆಯ ಪ್ರವಾಣ ತಗ್ಗಿತ್ತು. ಶನಿವಾರ 20 ಮಿ.ಮೀ. ಮಳೆ ಆಗಿತ್ತು. ಆದರೆ ಮೈ ನಡುಗುವ ಚಳಿ ಮುಂದುವರಿದಿದ್ದು, ಜನರು ಮನೆಗಳಿಂದ ಹೊರಬರಲು ಯೋಚಿಸುವಂತಾಗಿತ್ತು. ಬೆಳಗ್ಗೆ ಇಬ್ಬನಿ ಹೆಚ್ಚಿದ್ದು, ಇಡೀ ದಿನ ಸೂರ್ಯನ ದರ್ಶನ ಆಗಲಿಲ್ಲ. ವಾಡಿಕೆಗಿಂತ ಹೆಚ್ಚು ಮಳೆ: ನವೆಂಬರ್‌ನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರವಾಣದಲ್ಲಿ ಮಳೆ ಆಗಿದೆ. ನ.1ರಿಂದ 14ರವರೆಗೆ ಜಿಲ್ಲೆಯಲ್ಲಿ ವಾಡಿಕೆಯಂತೆ 35.6 ಮಿ.ಮೀ. ಮಳೆಯಾಗಬೇಕಿತ್ತು. ಬದಲಾಗಿ 96.7 ಮಿ.ಮೀ. ಮಳೆಯಾಗಿದ್ದು, ಶೇ.172 ಹೆಚ್ಚು ವರ್ಷಧಾರೆಯಾಗಿದೆ. ಈ ತಿಂಗಳಿನಲ್ಲಿ ಚನ್ನಪಟ್ಟಣದಲ್ಲಿ 99.4 ಮಿ.ಮೀ, ಕನಕಪುರದಲ್ಲಿ 120.3 ಮಿ.ಮೀ, ಗಡಿಯಲ್ಲಿ 64.2 ಹಾಗೂ ರಾಮನಗರ ತಾಲೂಕಿನಲ್ಲಿ 78.2 ಮಿ.ಮೀ. ಮಳೆ ದಾಖಲಾಗಿದೆ.

ವಾಯುಭಾರ ಕುಸಿತದಿಂದ ಮಳೆ ಹೆಚ್ಚಾಗಿದ್ದು, ರಾಗಿ ತೆನೆಗಳು ನೆಲಕ್ಕೆ ಒರಗಿವೆ. ಆದರೆ, ಎಲ್ಲಿಯೂ ಬೆಳೆಗೆ ಹಾನಿಯಾಗಿಲ್ಲ. ಸದ್ಯಕ್ಕೆ ಮಳೆಯಿಂದ ರಾಗಿಗೆ ಹೆಚ್ಚು ತೊಂದರೆ ಆಗದು. ರೈತರು ಆತಂಕಪಡುವ ಅಗತ್ಯವಿಲ್ಲ. ಉಮೇಶ್ ಉಪನಿರ್ದೇಶಕ, ಕೃಷಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net