ಜಿಲ್ಲಾದ್ಯಂತ ಮುಂದುವರಿದ ವರುಣನ ಅಬ್ಬರ

tunga dam Crustgate open
Published on

ಶಿವಮೊಗ್ಗ: ಜಿಲ್ಲಾದ್ಯಂತ ವರುಣನ ಅಬ್ಬರ ಸೋಮವಾರವೂ ಮುಂದುವರಿದಿದೆ. ಶಿವಮೊಗ್ಗ ತಾಲೂಕಿನಲ್ಲಿ ಆಡಗಡಿಯಲ್ಲಿ ಮನೆ ಗೋಡೆ ಕುಸಿದು ವೃದ್ಧೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಗಾಳಿ ಸಹಿತ ಮಳೆ ಬರುತ್ತಿರುವ ಕಾರಣದಿಂದ ಜಿಲ್ಲಾಡಳಿತ ಹೊಸನಗರ ಮತ್ತು ಸಾಗರ ತಾಲೂಕಿನ ಶಾಲಾ ಕಾಲೇಜು ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಿತ್ತು. ತೀರ್ಥಹಳ್ಳಿ, ಶೃಂಗೇರಿ, ಕೊಪ್ಪ ಭಾಗದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ತುಂಗಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಜಲಾಶಯದ ಎಲ್ಲ 22 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಯಿತು.

ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ಸಾಗರ, ಹೊಸನಗರ, ತೀರ್ಥಹಳ್ಳಿ ತಾಲೂಕುಗಳಲ್ಲಿ ನಿರಂತರವಾಗಿ ಮಳೆ ಆಗುತ್ತಿದೆ. ಇದರಿಂದ ಹಳ್ಳ-ಕೊಳ್ಳಗಳು, ಕೆರೆ-ಕಟ್ಟೆಗಳು ಭರ್ತಿಯಾಗಿವೆ. ತುಂಗಾ, ಭದ್ರಾ, ಶರಾವತಿ ಸೇರಿ ಉಪ ನದಿಗಳಿಗೂ ಜೀವಕಳೆ ಬಂದಿದೆ.

ತುಂಗೆಗೆ 37 ಸಾವಿರ ಕ್ಯೂಸೆಕ್ ನೀರು:

ತುಂಗಾ ನದಿಯ ಜಲಾನಯನ ಪ್ರದೇಶ ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ ಭಾಗದಲ್ಲಿ ನಿರಂತರವಾಗಿ ಮಳೆ ಆಗುತ್ತಿದ್ದು ತುಂಗಾ ಜಲಾಶಯಕ್ಕೆ 37 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಹರಿದುಬರುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದಿಂದ ಎಲ್ಲ ಗೇಟ್‌ಗಳನ್ನು ತೆರದು ಇಷ್ಟೇ ಪ್ರಮಾಣದ ನೀರನ್ನು ಸೋಮವಾರ ಹೊರಬಿಡಲಾಯಿತು. ಹಾಗಾಗಿ ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಶಿವಮೊಗ್ಗ ನಗರದ ಕೋರ್ಪಲಯ್ಯ ಛತ್ರ ಮಂಟಪ ಮುಕ್ಕಾಲು ಭಾಗ ಮುಳುಗಿದೆ. ಈ ವರ್ಷ ಮೊದಲ ಬಾರಿಗೆ ತುಂಗಾ ನದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಸಾರ್ವಜನಿಕರು ವೀಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net