

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವ ಕಾರಣ ಗರಿಷ್ಠ ಉಷ್ಣಾಂಶದಲ್ಲಿ ಕುಸಿತ ಕಂಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ 2-3 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಲಿದೆ.
ಶುಕ್ರವಾರ ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಕ್ರಮವಾಗಿ 40.2 ಮತ್ತು 40.6 ಡಿ. ಸೆ. ಉಷ್ಣಾಂಶ ದಾಖಲಾಗಿದೆ. ಉಳಿದ ಜಿಲ್ಲೆಗಳಲ್ಲಿ 36-38 ಡಿ. ಸೆ. ಇದ್ದು, ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮೈಸೂರು ಮತ್ತು ದಾವಣಗೆರೆ ಹೊರತುಪಡಿಸಿದರೆ ಉಳಿದೆಡೆ 32-36 ಡಿ. ಸೆ. ಉಷ್ಣಾಂಶವಿತ್ತು.
ಬೆಂಗಳೂರು ಸುತ್ತಮುತ್ತ ವ್ಯಾಪಕ ಮಳೆ:
ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದ್ದು, ಶುಕ್ರವಾರ ರಾಜಧಾನಿ ಬೆಂಗಳೂರು ಸುತ್ತಲಿನ ಜಿಲ್ಲೆಗಳಲ್ಲಿ ವ್ಯಾಪಕ ವರ್ಷಧಾರೆಯಾಗಿದೆ. ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಹಲವೆಡೆ ಗುಡುಗಿನೊಂದಿಗೆ ಬಿರುಸಿನ ಮಳೆಯಾಗಿದೆ. ಮೈಸೂರು, ಮಂಡ್ಯ, ಶಿವಮೊಗ್ಗ, ಬೀದರ್, ಕಲಬುರಗಿ, ಯಾದಗಿರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಸಾಧಾರಣ ಪ್ರಮಾಣದ ಮಳೆಯಾಗಿದೆ.
ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿಯಲ್ಲಿ ಅತೀ ಹೆಚ್ಚು 43 ಮಿ.ಮೀ. ಮಳೆಯಾಗಿದೆ. ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಪಂ ವ್ಯಾಪ್ತಿಯಲ್ಲಿ 39, ಚಿಕ್ಕೋಡಿ ತಾಲೂಕಿನ ನಾಗರಮನ್ನಳ್ಳಿಯಲ್ಲಿ 38, ಚಿಂತಾಮಣಿ ತಾಲೂಕಿನ ಎಂ.ಗೊಲ್ಲಹಳ್ಳಿಯಲ್ಲಿ 38, ಶ್ರೀನಿವಾಸಪುರ ತಾಲೂಕಿನ ಸೋಮಯಾಜಿಪಾಳ್ಯದಲ್ಲಿ 28, ಗೌರಿಬಿದನೂರು ತಾಲೂಕಿನ ನಕ್ಕಲಹಳ್ಳಿಯಲ್ಲಿ 25 ಮಿ.ಮೀ. ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.
ಇಂದು ಬಿರುಗಾಳಿ ಸಹಿತ ಮಳೆ:
ರಾಜ್ಯದ ಹಲವು ಜಿಲ್ಲೆಗಳಲ್ಲಿ ಶನಿವಾರ ಬಿರುಗಾಳಿಯೊಂದಿಗೆ ಮಳೆಯಾಗಲಿದ್ದು, ಪ್ರತೀ ಗಂಟೆಗೆ ಗಾಳಿಯು 40-50 ಕಿ.ಮೀ. ವೇಗದಲ್ಲಿ ಬೀಸಲಿದೆ. ಜತೆಗೆ ಗುಡುಗು ಸಹಿತ ವರ್ಷಧಾರೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಿಕ್ಕಮಗಳೂರು, ಮೈಸೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಭಾರೀ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ. ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಹಲವೆಡೆ ಬಿರುಸಿನ ಗಾಳಿಯೊಂದಿಗೆ ಸಾಧಾರಣ ಪ್ರಮಾಣದ ಮಳೆ, ದಕ್ಷಿಣ ಕನ್ನಡದ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗಲಿದೆ. ಉಡುಪಿ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಬೆಳಗಾವಿ, ಬಾಗಲಕೋಟೆ, ಗದಗ, ಧಾರವಾಡ, ಕೊಪ್ಪಳ, ಹಾವೆೇರಿ ಜಿಲ್ಲೆಗಳಲ್ಲಿ ಕೆಲವೆಡೆ ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ವರ್ಷಧಾರೆಯಾಗುವ ಸಾಧ್ಯತೆ ಇದೆ.