ಫೆಂಗಲ್ ಪರಿಣಾಮ ಶಿವಮೊಗ್ಗ ಜಿಲ್ಲೆಯ ಹಲವೆಡೆ ಮಳೆ

Cyclone Fengal effect rain
ಫೆಂಗಲ್ ಚಂಡಮಾರುತದ ಪರಿಣಾಮ ಶಿವಮೊಗ್ಗ ಹೊಳೆ ಬಸ್ ನಿಲ್ದಾಣದ ಬಳಿ ಮಳೆ ಸುರಿಯಿತು.
Published on

ಶಿವಮೊಗ್ಗ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಫೆಂಗಲ್ ಚಂಡಮಾರುತದ ಪರಿಣಾಮ ಜಿಲ್ಲಾದ್ಯಂತ ಸೋಮವಾರ ಇಡೀ ದಿನ ಮೋಡ ಕವಿದ ವಾತವರಣವಿದ್ದು ಸಂಜೆ ಶಿವಮೊಗ್ಗ ನಗರ ಸೇರಿ ಹಲವೆಡೆ ಮಳೆ ಸುರಿಯಿತು.

ಕಳೆದೆರಡು ದಿನಗಳಿಂದ ಮೋಡ ಕವಿದ ವಾತಾವರಣ ಮುಂದುವರಿದಿದ್ದು ಮಲೆನಾಡಿನ ಭತ್ತ ಮತ್ತು ಮೆಕ್ಕೆಜೋಳ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇನ್ನೂ ಮೂರ್ನಾಲ್ಕು ದಿನ ಮಳೆ ಆಗುವ ಸಾಧ್ಯತೆ ಹೆಚ್ಚಿದ್ದು ಕೋಯ್ಲು ಮಾಡಿದ್ದ ರೈತರು ಬೆಳೆ ರಕ್ಷಿಸಿಕೊಳ್ಳಲು ಅಕ್ಷರಶಃ ಪರದಾಟ ನಡೆಸುವಂತಾಯಿತು.

ಮಳೆಯ ಮುನ್ಸೂಚನೆ ಇಲ್ಲದೆ ಯಂತ್ರದ ಮೂಲಕ ಕೋಯ್ಲು ಮಾಡಿದ್ದವರು ಭತ್ತವನ್ನು ಸುರಕ್ಷಿತ ಪ್ರದೇಶಕ್ಕೆ ಕೊಂಡೊಯ್ದು ರಕ್ಷಣೆ ಮಾಡಿಕೊಂಡರು. ಆದರೆ ಕಟಾವು ಆಗಿದ್ದ ಭತ್ತದ ಹುಲ್ಲು ಮಳೆಗೆ ತೋಯ್ದು ತೊಪ್ಪೆಯಾಯಿತು.

ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿದ್ದು ಕತ್ತಲೆ ಆವರಿಸಿದ ಅನುಭವವಾಗಿತ್ತು. ಬಳಿಕ ಸಂಜೆ ಶಿವಮೊಗ್ಗ ನಗರದಲ್ಲಿ ಮಳೆ ಸುರಿದರೆ ಜಿಲ್ಲೆಯ ಹಲವೆಡೆ ಜಿಟಿಜಿಟಿ ಮಳೆಯಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾಸನ ಸೇರಿ ಹಲವು ಜಿಲ್ಲೆಗಳಲ್ಲಿ ಇನ್ನೆರಡು ದಿನಗಳವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು ಆರೆಂಜ್ ಅಲರ್ಟ್ ಘೋಷಿಸಿದೆ. ಹಾಗಾಗಿ ಬಹಳಷ್ಟು ರೈತರು ಭತ್ತದ ಕೋಯ್ಲನ್ನು ಮುಂದೂಡಿದ್ದಾರೆ.

ಸೈಕ್ಲೋನ್ ಮಳೆಯ ಮುನ್ಸೂಚನೆ ಇಲ್ಲದೆ ಛತ್ರಿ ಇಲ್ಲದೆ ಶಾಲಾ ಕಾಲೇಜಿಗಳಿಗೆ ತೆರಳಿದ್ದ ಮಕ್ಕಳು ಸಂಜೆ ಮನೆಗೆ ತೆರಳಲು ಪರದಾಟ ನಡೆಸಿದರು. ಕೆಲ ಮಕ್ಕಳು ಸುರಿಯುವ ಜಿಟಿ ಜಿಟಿ ಮಳೆಯನ್ನೂ ಲೆಕ್ಕಿಸದೆ ನಡೆದುಕೊಂಡು ಮನೆ ಸೇರಿದರು. ಇನ್ನು ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಮಳೆಯಿಂದ ಬಸ್ ನಿಲ್ದಾಣಗಳು, ಅಂಗಡಿ ಮುಂಗಟ್ಟುಗಳ ಮುಂದೆ ನಿಂತು ರಕ್ಷಣೆ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net