ರಾಜ್ಯದಲ್ಲಿ ಮುಂದಿನ 4 ದಿನ ಮಳೆ ಇನ್ನಷ್ಟು ಜೋರು; ನಾಳೆ-ನಾಡಿದ್ದು ಕರಾವಳಿ-ಮಲೆನಾಡಲ್ಲಿ ರೆಡ್ ಅಲರ್ಟ್..

Heavy Rain
Published on

ಬೆಂಗಳೂರು: ರಾಜ್ಯದ ಹಲವೆಡೆ ಅಬ್ಬರಿಸುತ್ತಿರುವ ಮಳೆ ಮುಂದಿನ 4 ದಿನ ಇನ್ನಷ್ಟು ಜೋರಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಂಗಳವಾರ ರಾತ್ರಿಯಿಂದ ಬುಧವಾರದವರೆಗೆ ಶಿರಾಲಿ 29 ಸೆಂಮೀ, ಸುಬ್ರಹ್ಮಣ್ಯ 22 ಸೆಂಮೀ, ಮಂಡ್ಯ 14 ಸೆಂಮೀ, ಭಾಗಮಂಡಲ 12 ಸೆಂಮೀ, ಕುಣಿಗಲ್ ಮತ್ತು ಕಾರವಾರದಲ್ಲಿ ತಲಾ 11 ಸೆಂಮೀ ಮಳೆ ಬಿದ್ದಿದೆ.

ಉಡುಪಿ, ದಕ್ಷಿಣಕನ್ನಡ, ಉತ್ತರಕನ್ನಡ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಆ.4 ಮತ್ತು ಆ.5ರಂದು ಅತಿ ಹೆಚ್ಚು ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಸತತ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಅಪಾಯ ಮಟ್ಟದಲ್ಲಿ ನದಿ ನೀರು ಹರಿಯುತ್ತಿರುವುದರಿಂದ ಸಮುದ್ರ ಮತ್ತು ನದಿ ತೀರದ ನಿವಾಸಿಗಳಿಗೆ ಹಾಗೂ ಮೀನುಗಾರಿಕೆ ನಡೆಸದಂತೆ ಇಲಾಖೆ ಎಚ್ಚರಿಕೆ ನೀಡಿದೆ.

ಚಿಕ್ಕಬಳ್ಳಾಪುರ, ಬೆಳಗಾವಿ, ಹಾವೇರಿಯಲ್ಲಿ ಮುಂದಿನ ಎರಡು ದಿನ, ಬೀದರ್, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಹಾಸನ, ಕೋಲಾರದಲ್ಲಿ ಆ.4ರಂದು ಯೆಲ್ಲೋ ಅಲರ್ಟ್ ಇರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಶೇ.70 ವಾಡಿಕೆಗಿಂತ ಹೆಚ್ಚು: ಜು.28ರಿಂದ ಆ.3ರವರೆಗೆ ರಾಜ್ಯಾದ್ಯಂತ ವಾಡಿಕೆಗಿಂತ ಶೇ.70 ಹೆಚ್ಚು ಮಳೆ ಬಿದ್ದಿದೆ. 62 ಮಿಮೀ ಮಳೆ ಬದಲಾಗಿ 105 ಮಿಮೀ ಮಳೆಯಾಗಿದ್ದು, ಶೇ.70 ಹೆಚ್ಚು ಬಿದ್ದಿದೆ. ದಕ್ಷಿಣ ಒಳನಾಡಿನಲ್ಲಿ 20 ಮಿಮೀ ಮಳೆಯಾಗಬೇಕಿತ್ತು. 140 ಮಿಮೀ ಮಳೆಯಾಗಿದ್ದು, ಶೇ.616 ವಾಡಿಕೆಗಿಂತ ಹೆಚ್ಚು ಸುರಿದಿದೆ. ಉತ್ತರ ಒಳನಾಡಿನಲ್ಲಿ 28 ಮಿಮೀ ಮಳೆ ಬದಲಾಗಿ 78 ಮಿಮೀ ಮಳೆಯಾಗಿದ್ದು, ಶೇ.175 ಹೆಚ್ಚು ಸುರಿದಿದೆ. ಮಲೆನಾಡು ಮತ್ತು ಕರಾವಳಿಯಲ್ಲಿ ವಾಡಿಕೆಗಿಂತ ಕಡಿಮೆ ಬಿದ್ದಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net