ಅಬ್ಬರಿಸಿದ ಮೈಚಾಂಗ್ ಚಂಡಮಾರುತ: ಚೆನ್ನೈನಲ್ಲಿ 2 ಸಾವು- ವಿಮಾನ ಸಂಚಾರ ಸ್ಥಗಿತ

chennai
Published on

Pounds  Amid Warning, Flights Hit, Runway Shut

ಚೆನ್ನೈ: ಮೈಚಾಂಗ್ ಚಂಡಮಾರುತ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿಗೆ ಹತ್ತಿರವಾಗುತ್ತಿದ್ದಂತೆ ಸೋಮವಾರ ರಾತ್ರಿ ಚೆನ್ನೈನಲ್ಲಿ ಭಾರೀ ಮಳೆ ಸುರಿಯಿತು. ನಗರದಾದ್ಯಂತ ರಸ್ತೆಗಳು, ತಗ್ಗುಪ್ರದೇಶಗಳು ಜಲಾವೃತವಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಮೈಚಾಂಗ್ ಚಂಡಮಾರುತ: ಆಂಧ್ರಪ್ರದೇಶದ ಎಲ್ಲಾ ಶಾಲೆಗಳಿಗೆ ಇಂದು, ನಾಳೆ ರಜೆ
ಚೆನ್ನೈ ವಿಮಾನ ನಿಲ್ದಾಣದ ರನ್‌ವೇ ಕೂಡ ಜಲಾವೃತವಾಗಿದ್ದು, ಹಲವಾರು ಪ್ರದೇಶಗಳಲ್ಲಿ ಮನೆಗಳು, ಅಂಗಡಿಗಳಿಗೆ ನೀರು ನುಗ್ಗಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿವೆ. ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.

ಭಾರೀ ಮಳೆ ಮತ್ತು ಗಾಳಿಯಿಂದಾಗಿ ಚೆನ್ನೈನ ಕಾನತ್ತೂರಿನಲ್ಲಿ ಹೊಸದಾಗಿ ನಿರ್ಮಿಸಲಾದ ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ. ಮೃತರು ಜಾರ್ಖಂಡ್ ನಿವಾಸಿಗಳು ಎಂದು ತಿಳಿದುಬಂದಿದೆ. ಮೃತರು ಮತ್ತು ಗಾಯಾಳುವಿನ ಹೆಸರು ತಿಳಿದುಬಂದಿಲ್ಲ. ರನ್‌ವೇ ಜಲಾವೃತಗೊಂಡಿದ್ದರಿಂದ ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿವೆ.

ಘಟನೆ ಬಳಿಕ ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಇತರ ಮಾರ್ಗಗಳಿಂದ ಬರುವ ಮತ್ತು ತೆರಳುವ ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ 11 ಗಂಟೆಯವರೆಗೆ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಈ ಮೊದಲು, ಚೆನ್ನೈ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 9.17 ರಿಂದ 11.30 ರವರೆಗೆ ಆಗಮನವನ್ನು ಸ್ಥಗಿತಗೊಳಿಸಲಾಗಿತ್ತು.

ಭಾರೀ ಮಳೆಯಿಂದಾಗಿ ಚೆನ್ನೈನ ಹಲವು ಮೆಟ್ರೋ ನಿಲ್ದಾಣಗಳು ಸಹ ಜಲಾವೃತವಾಗಿವೆ. ಸೇಂಟ್ ಥಾಮಸ್ ಮೆಟ್ರೋ ನಿಲ್ದಾಣದಲ್ಲಿ 4 ಅಡಿಗಳಷ್ಟು ನೀರು ಸಂಗ್ರಹಗೊಂಡಿದ್ದು, ನಿಲ್ದಾಣದ ಪ್ರವೇಶವನ್ನು ನಿಲ್ಲಿಸಲಾಗಿದೆ. ಇಲ್ಲಿಗೆ ಬದಲಾಗಿ ಆಲಂದೂರಿನಲ್ಲಿ ಮೆಟ್ರೋ ರೈಲು ಹತ್ತಲು ಪ್ರಯಾಣಿಕರಿಗೆ ಸೂಚಿಸಲಾಗಿದೆ.
ತಮಿಳುನಾಡಿನಲ್ಲಿ ಸರ್ಕಾರ ಸೋಮವಾರ ಸಾರ್ವಜನಿಕ ರಜೆ ಘೋಷಿಸಿದ್ದು, ಚೆನ್ನೈನಲ್ಲಿ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಮನೆಯಿಂದ ಕರ್ತವ್ಯ ನಿರ್ವಹಿಸಲು ಕ್ರಮ ವಹಿಸುವಂತೆ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net