

ಬೆಂಗಳೂರು: ರಾಜ್ಯಾದ್ಯಂತ ಹಿಂಗಾರು ಆರ್ಭಟ ಹಿನ್ನೆಲೆಯಲ್ಲಿ ಕೂಯ್ಲುಗೆ ಬಂದಿದ್ದ ಹಲವು ಬೆಳೆಗಳು ನೀರು ಪಾಲಾದರೆ, ಕಟಾವಿಗೆ ಬಂದಿರುವ ಉಳಿದ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಮೂರು ವರ್ಷದ ಬಳಿಕ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮುಂಗಾರು ಮಳೆ ಸುರಿದ ಪರಿಣಾಮ ಈ ಬಾರಿ 70 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಮಾಡಲಾಗಿದೆ. 10.28 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಏಕದಳ ಧಾನ್ಯ, 11.48 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ದ್ವಿದಳ ಧಾನ್ಯ, 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳುಗಳು ಬಿತ್ತನೆ ಮಾಡಲಾಗಿದೆ. 8.57 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ವಾಣಿಜ್ಯ ಬೆಳೆ ಬೆಳೆಯಲಾಗುತ್ತಿದೆ. ಆದರೆ, ಪೂರ್ವ ಅರಬ್ಬಿ ಸಮುದ್ರದಲ್ಲಿ ತೀವ್ರ ವಾಯುಭಾರ ತೀವ್ರ ಕುಸಿತವಾಗಿರುವ ಪರಿಣಾಮ ಬಿರುಸಾಗಿ ಮಳೆಯಾಗುತ್ತಿದ್ದು ಇನ್ನೇನು ಕೆಲ ದಿನಗಳಲ್ಲಿ ಕಟಾವಾಗಬೇಕಿದ್ದ ಬೆಳೆಗಳಿಗೆ ತೀವ್ರ ಹಾನಿ ಮಾಡುತ್ತಿದೆ.
ಅ.18ರಂದು ಆರೆಂಜ್ ಅಲರ್ಟ್: ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ತೀವ್ರ ಕುಸಿತವಾಗಿರುವ ಪರಿಣಾಮ ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮುಂದಿನ ಐದಾರು ದಿನ ಜೋರು ಮಳೆಯಾಗಲಿದೆ. ಹಿಂಗಾರು ಆಶಾದಾಯಕವಾಗಿರುವ ಹಿನ್ನೆಲೆಯಲ್ಲಿ ಅ.1ರಿಂದ ಉತ್ತಮ ಮಳೆಯಾಗುತ್ತಿದೆ. ಕೆಲ ಜಿಲ್ಲೆಗಳಲ್ಲಿ ಅ.18ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಕೊಟ್ಟಿದೆ. ಮುಂದಿನ ನಾಲ್ಕು ದಿನ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆ ಬೀಳಲಿದೆ.
ಸ್ಮಾರಕಗಳು ಮುಳುಗಡೆ: ತುಂಗಭದ್ರಾ ಜಲಾಶಯದಿಂದ ನದಿಗೆ 82 ಸಾವಿರ ಕ್ಯೂಸೆಕ್ಗೂ ಅಧಿಕ ನೀರನ್ನು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಹಂಪಿಯ ಕೆಲ ಸ್ಮಾರಕಗಳು ಮುಳಗಡೆಯಾಗಿವೆ. ಚಕ್ರತೀರ್ಥ, ಕೋದಂಡರಾಮ, ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನಕ್ಕೆ ತೆರಳುವ ಪಾದಚಾರಿ ಮಾರ್ಗ ಸಂಪರ್ಕ ಕಡಿತವಾಗಿದೆ.
ಮುರಿದು ಬಿದ್ದ ಭದ್ರಾ ನಾಲೆ ಸೇತುವೆ: ಭದ್ರಾವತಿ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಅವಾಂತರ ಸೃಷ್ಟಿಸಿದೆ. ಹಂಚಿನ ಸಿದ್ದಾಪುರದಲ್ಲಿ ಭದ್ರಾ ನಾಲೆಗೆ ಅಡ್ಡಲಾಗಿ ನಿರ್ವಿುಸಿದ್ದ ಸೇತುವೆ ಶನಿವಾರ ಮುರಿದುಬಿದ್ದಿದೆ.
ಉಕ್ಕಿದ ಮಲಪ್ರಭೆ: ಬಾಗಲಕೋಟೆ ಹಾಗೂ ನೆರೆ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಬೆಣ್ಣೆ ಹಳ್ಳ ತುಂಬಿ ಹರಿದು ಮಲಪ್ರಭಾ ನದಿಯಲ್ಲಿ ಪ್ರವಾಹ ಉಂಟು ಮಾಡಿದೆ. ಬಾದಾಮಿ, ಗುಳೇದಗುಡ್ಡ ತಾಲೂಕಿನ ವಿವಿಧೆಡೆ ನದಿ ತೀರದಲ್ಲಿ ಬೆಳೆಗಳು ಜಲಾವೃತವಾಗಿವೆ.
ಸಾಲದ ಸುಳಿಯಲ್ಲಿ ರೈತ: ರಾಜ್ಯದ ಬಹುತೇಕ ಜಿಲ್ಲೆಗಳ ಜಿಲ್ಲೆಗಳಲ್ಲಿ ಕೂಯ್ಲುಗೆ ಬಂದಿ ರುವ ಏಕದಳ, ದ್ವಿದಳ ಧಾನ್ಯ ಸೇರಿ ವಾಣಿಜ್ಯ ಬೆಳೆಗಳಿಗೆ ಹಾನಿಯಾಗುತ್ತಿದೆ. ಹಾಗಾಗಿ, ಅಧಿಕ ಮಳೆಯಿಂದ ಬೆಳೆಗಳು ಸರ್ವನಾಶವಾದ ಹಿನ್ನೆಲೆಯಲ್ಲಿ ರೈತರ ಕಂಗಾಲಾಗಿದ್ದಾರೆ. ಈ ಬಾರಿಯಾದರೂ ಸಾಲ ತೀರಿಸುವ ಆಲೋಚನೆಯಲ್ಲಿದ್ದ ರೈತರು, ಇನ್ನಷ್ಟು ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ.