12ರವರೆಗೆ ವಿವಿಧೆಡೆ ಮಳೆ

7-67f16bd4ea188
Published on

ಬೆಂಗಳೂರು: ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ತೇವಾಂಶ ಭರಿತ ಮೋಡಗಳಿರುವ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಏ.12ರವರೆಗೆ ಗುಡುಗು ಸಹಿತ ಆಲಿಕಲ್ಲು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಶನಿವಾರ ಮಲೆನಾಡಿನ ವಿವಿಧೆಡೆ ಉತ್ತಮ ವರ್ಷಧಾರೆಯಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಸಾಗರ, ಹೊಸನಗರ, ಶಿಕಾರಿಪುರ, ಸೊರಬ ತಾಲೂಕಿನ ಬಹುತೇಕ ಕಡೆ ಹಾಗೂ ಶಿವಮೊಗ್ಗ ನಗರದಲ್ಲಿ ವರುಣ ಅಬ್ಬರಿಸಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಕಳೆದ ಕೆಲ ದಿನಗಳಿಂದ ಸಾಧಾರಣವಾಗಿ ಸುರಿಯುತ್ತಿದ್ದ ಮಳೆ ಶನಿವಾರ ಭರ್ಜರಿಯಾಗಿ ಬಂದಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವಿವಿಧೆಡೆ ಮಳೆ ಮುಂದುವರಿದಿದೆ. ಜಿಲ್ಲೆಯ ಅನೇಕ ಕಡೆ ಶನಿವಾರ ಸಂಜೆ ಮೋಡ ಕವಿದ ವಾತಾವರಣವಿದ್ದು ಕೆಲವು ಕಡೆಯಲ್ಲಿ ಉತ್ತಮ ಮಳೆಯಾಗಿದೆ. ಕೊಡಗು, ಮೈಸೂರು, ಚಾಮರಾಜನಗರದಲ್ಲಿ ಬಿರುಸಾಗಿ ಮಳೆಯಾಗುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಬಳಿಕ, ಈ ಜಿಲ್ಲೆಗಳಲ್ಲಿ ಮುಂದಿನ 5 ದಿನ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ. ಉಳಿದ ಜಿಲ್ಲೆಗಳಲ್ಲೂ ಸಾಧಾರಣ ಮಳೆಯಾಗಲಿದೆ. ಮುಂದಿನ 2 ದಿನದ ಬಳಿಕ 2-4 ಡಿ.ಸೆ. ಉಷ್ಣಾಂಶ ಹೆಚ್ಚಳವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net