ಮುಳಬಾಗಿಲುನಲ್ಲಿ ಇಂದು ನಡೆಯಬೇಕಿದ್ದ ಪಂಚರತ್ನ ಯಾತ್ರೆಯ ಬೃಹತ್​ ಸಮಾವೇಶ ರದ್ದು! ಜೆಡಿಎಸ್​ ಕಾರ್ಯಕರ್ತರಿಗೆ ನಿರಾಸೆ

jds pancharatna yatre
Published on

ಕೋಲಾರ: ಮುಂಬರುವ ವಿಧಾನಸಭೆ ಚುನಾವಣೆಯನ್ನೇ ಗುರಿಯಾಗಿಸಿಕೊಂಡು ಜೆಡಿಎಸ್​ ಆರಂಭಿಸಿದ ಪಂಚರತ್ನ ಯಾತ್ರೆಗೆ ಮಳೆ ಅಡ್ಡಿಯಾಗಿದೆ. ಮುಳಬಾಗಿಲಿನ ಕುರುಡುಮಲೆ ಮಹಾಗಣಪತಿ ದೇವಸ್ಥಾನದಲ್ಲಿ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ, ನಿಖಿಲ್​ ಕುಮಾರಸ್ವಾಮಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷರೂ ಆದ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ಯಾತ್ರೆಗೆ ಇಂದು(ನ,1) ಚಾಲನೆ ನೀಡಿದರು. ಬಳಿಕ ನಡಯಬೇಕಿದ್ದ ಬೃಹತ್​ ಸಮಾವೇಶ ಮಳೆ ಹಿನ್ನೆಲೆ ರದ್ದಾಗಿದೆ.

ಮುಳಬಾಗಿಲು ಪಟ್ಟಣದ ಬೈಪಾಸ್ ಬಳಿ ಇಂದು ನಡೆಯಬೇಕಿದ್ದ ಜೆಡಿಎಸ್​ ಸಮಾವೇಶ ರದ್ದಾಗಿದೆ. ನಿರಂತರ ಮಳೆ ಬೀಳುತ್ತಿರುವ ಹಿನ್ನೆಲೆ ಸಮಾವೇಶ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳನ್ನು ಇಂದಿನಿಂದ ಐದು ದಿನಗಳ ವರೆಗೆ ಮುಂದೂಡಲಾಗಿದೆ. ರಾಜ್ಯದ ವಿವಿಧೆಡೆಯಿಂದ ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಮುಳಬಾಗಿಲಿಗೆ ಸಮಾವೇಶಕ್ಕೆ ಆಗಮಿಸಿದ್ದರು. ಎಲ್ಲರೂ ಮಳೆಗೆ ಹಿಡಿ ಶಾಪ ಹಾಕುತ್ತ ವಾಪಸ್ ತೆರಳಲುತ್ತಿದ್ದ ದೃಶ್ಯ ಕಂಡು ಬಂತು.

ಡಿಸೆಂಬರ್​ 6ರವರೆಗೆ ಒಟ್ಟು 36 ವಿಧಾನಸಭಾ ಕ್ಷೇತ್ರಗಳಲ್ಲಿ ರಥಯಾತ್ರೆ ಸಂಚರಿಸಲಿದೆ. ಪ್ರತಿ ತಾಲೂಕಿನಲ್ಲಿ ಆರು ಸಣ್ಣ ಸಭೆ, ಮೂರು ಸಾರ್ವಜನಿಕ ಸಭೆ ನಡೆಸುವುದಲ್ಲದೇ ಸಾರ್ವಜನಿಕರು, ರೈತರೊಂದಿಗೆ ಮಾತುಕತೆ ನಡೆಸುವುದು, ಪ್ರತಿ ವಿಧಾನಸಭಾ ಕ್ಷೇತ್ರದ ಒಂದು ಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಹೂಡುವ ಯೋಜನೆ ಜೆಡಿಎಸ್​ದ್ದು. ಮಳೆಯಿಂದಾಗಿ ದಿನಾಂಕದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ.

ಪಂಚರತ್ನ ಎಂದರೆ?: ಪಂಚರತ್ನ ಎಂದರೆ ಅದು ಕೇವಲ ಘೋಷಣೆ ಅಲ್ಲ. ಎಲ್ಲರಿಗೂ ಉಚಿತ ಶಿಕ್ಷಣ, ಆರೋಗ್ಯ, ವಿದ್ಯುತ್​, ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ, ಪ್ರತಿ ಕುಟುಂಬಕ್ಕೆ ಯಾವುದಾದರೊಂದು ಉದ್ಯೋಗ, ಸ್ವಂತ ಉದ್ಯೋಗ ಕಲ್ಪಿಸುವ ಮೂಲಕ ಆರ್ಥಿಕ ಬಲವನ್ನು ತುಂಬುವುದು, ಪ್ರತಿಯೊಬ್ಬರಿಗೂ ಸೂರು ಒದಗಿಸುವುದು ಇದರ ಉದ್ದೇಶ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net