

ತೀರ್ಥಹಳ್ಳಿ: ಕೆಲ ದಿನಗಳಿಂದ ತಾಲೂಕಿನಲ್ಲಿ ಪ್ರತಿದಿನ ಸಂಜೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಈ ಬಾರಿ ದೀಪಾವಳಿ ಹಬ್ಬದ ಸಂಭ್ರಮ ಕೊಂಚ ಕಡಿಮೆಯಾಗಿದೆ.
ಪಟಾಕಿ, ಹೂವು, ಹಣ್ಣು ವ್ಯಾಪಾರಿಗಳಿಗೆ ನಿರೀಕ್ಷಿತ ವ್ಯವಹಾರವೂ ನಡೆಯದೆ ನಿರಾಶರಾಗಿದ್ದಾರೆ. ಶನಿವಾರದಿಂದ ಪ್ರತಿದಿನ ಸಂಜೆಯಾಗುತ್ತಿದ್ದಂತೆ ಗುಡುಗು ಸಿಡಿಲಿನೊಂದಿಗೆ ಆರಂಭವಾಗುವ ಮಳೆ ರಾತ್ರಿಯಿಡೀ ಸುರಿದು ಹಬ್ಬದ ಉತ್ಸಾಹಕ್ಕೆ ಅಡ್ಡಿ ಉಂಟುಮಾಡಿದೆ. ಅಂಗಡಿ ಮುಂಗಟ್ಟುಗಳು, ವಾಹನ ಪೂಜೆಗೆ ಚೆಂಡು ಹೂ ಖರೀದಿ ಮಾಡುವರೆಂಬ ನಿರೀಕ್ಷೆಯಲ್ಲಿ ಬೇರೆ ಊರುಗಳಿಂದ ಅಧಿಕ ಸಂಖ್ಯೆಯ ವ್ಯಾಪಾರಿಗಳು ಬಂದಿದ್ದರು. ಆದರೆ ನಿರೀಕ್ಷಿತ ಮಟ್ಟದ ವ್ಯಾಪಾರವಿಲ್ಲದೆ ಗ್ರಾಹಕರ ಬರುವಿಕೆಗೆ ಕಾಯುವಂತಾಗಿದೆ. ಪಟಾಕಿ ಮಳಿಗೆಗಳನ್ನು ಜನದಟ್ಟಣೆ ಪ್ರದೇಶದಿಂದ ದೂರವಿರುವ ಅನಂತಮೂರ್ತಿ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ಹಾಕಲಾಗಿತ್ತು. ನಿತ್ಯ ಮಳೆ ಸುರಿದ ಕಾರಣ ಕ್ರೀಡಾಂಗಣದಲ್ಲಿ ಕೆಸರು ತುಂಬಿದ್ದು, ಜನರು ಪಟಾಕಿ ಕೊಳ್ಳಲು ಪರದಾಡುವಂತಾಯಿತು.