

ಬಂಟ್ವಾಳ : ಮಂಗಳವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಬಂಟ್ವಾಳ ತಾಲೂಕಿನಲ್ಲಿ ಅಪಾರ ನಾಶನಷ್ಟ ಉಂಟಾಗಿದೆ.
ಪುದು ಗ್ರಾಮದ ಜಯಶ್ರೀ ವಾಮನ ಎಂಬುವರ ಮನೆಗೆ ಹೊಂದಿದ್ದ ಬರೆ ಕುಸಿದು ಮನೆಯ ತಳ ಕುಸಿಯುವ ಆತಂಕ ಎದುರಾಗಿದೆ. ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ ಅರುಣ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ವೀರಕಂಬ ಗ್ರಾಮದ ಮಂಗಲಪದವು ಎಂಬಲ್ಲಿ ಶಂಕರ ಕೊರಗ ಎಂಬುವರ ಮನೆಯ ಗೋಡೆ ಬಿರುಕು ಬಿಟ್ಟಿದ್ದು ತೀವ್ರ ಹಾನಿಯಾಗಿದೆ.
ಮೇರಮಜಲು ಗ್ರಾಮದ ಬಡ್ಡುರು ಕಾನ ಜುಲಿಯಾನ ಡಿಸೋಜರ ಮನೆಗೆ ಸಮೀಪದ ಬರೆ ಕುಸಿದು ಬಿದ್ದಿದ್ದು ಮನೆ ತಳ ಕುಸಿಯುವ ಹಂತದಲ್ಲಿದೆ.
ಲಾರೆನ್ಸ್ ಡಿಸೋಜ ಎಂಬವರ ಮನೆ ಗೋಡೆ ಹಾಗೂ ಹೆಂಚಿನ ಛಾವಣಿಗೆ ಹಾನಿಯಾಗಿದೆ. ಮೇರಿ ಬ್ರಾಗ್‌ಎಂಬುವರ ತೋಟದಲ್ಲಿ ಅಡಿಕೆ ಕೃಷಿಗೆ ಹಾನಿಯಾಗಿದ್ದು ಅನೇಕ ಮರಗಳು ಉರುಳಿ ಬಿದ್ದಿದೆ. ಮೇರಮಜಲು ಗ್ರಾಮದ ವಿಲಿಯಂ ಲ್ಯಾನ್ಸಿ ಪಿರೇರಾರವರ 60 ಅಡಿಕೆ ಮರ 40 ಬಾಳೆಗಿಡಗಳು ಧರಶಾಯಿಯಾಗಿವೆ.
ಬಿ.ಸಿ.ರೋಡಿನ ಮುಖ್ಯವೃತ್ತದ ಬಳಿ ಬಂಟ್ವಾಳ ಪೇಟೆ ಸಂಪರ್ಕಿಸುವ ರಸ್ತೆಯ ಸ್ಪರ್ಶ ಕಲಾ ಮಂದಿರ ಬಳಿ ಬೃಹತ್ ಗಾತ್ರದ ದೇವದಾರ ಮರ ಗಾಳಿಗೆ ಬುಡ ಸಮೇತ ಉರುಳಿ ಬಿದ್ದಿದೆ. ಬಿ.ಸಿ.ರೋಡಿನ ಹಳೆ ಉಪನೋಂದಣಿ ಕಚೇರಿ ಮುಂಭಾಗ ಮರದ ಗೆಲ್ಲೊಂದು ಕಾರಿನ ಮೇಲೆ ಬಿದ್ದು ಕಾರು ಜಖಂ ಆಗಿದೆ.
ಬಿ.ಸಿ.ರೋಡಿನ ಎಸ್‌ಸಿಡಿಸಿಸಿ ಬ್ಯಾಂಕ್ ಬಳಿ ಇದ್ದ ನಗರ ಪೋಲಿಸ್ ಠಾಣೆಯ ನಾಮಫಲಕ ವಾಲಿ ನಿಂತಿದೆ. ಮುಖ್ಯವೃತ್ತ ಸೇರಿದಂತೆ ನಗರ ಭಾಗದಲ್ಲಿದ್ದ ಅನೇಕ ಹೋರ್ಡಿಂಗ್‌ಗಳು ಮುರಿದು ಬಿದ್ದಿವೆ.