ದಕ್ಷಿಣ ರಾಜ್ಯಗಳಿಗೆ ಮತ್ತೆ ಮಳೆ ಆತಂಕ; ಕರ್ನಾಟಕ ಸಹಿತ 5 ರಾಜ್ಯಗಳಿಗೆ ಎಚ್ಚರಿಕೆ

1193820
Published on

ನವದೆಹಲಿ: ನವೆಂಬರ್​ನ ಅಕಾಲಿಕ ಮಳೆಗೆ ಜನರು ಹೈರಾಣಾಗಿರುವುದು ಸಾಲದೆಂಬಂತೆ ಮತ್ತೆ ಐದು ದಿನ ಮಳೆ ಆತಂಕ ಎದುರಾಗಿದೆ. ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ವಾತಾವರಣ ಸೃಷ್ಟಿಯಾಗಿದ್ದು, ಅದರ ಪರಿಣಾಮದಿಂದ ವಾಯುಭಾರ ಕುಸಿತ ಉಂಟಾಗಿ ಕರ್ನಾಟಕ ಸಹಿತ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಂದಿನ ಐದು ದಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ ಮುನ್ಸೂಚನೆ ನೀಡಿದೆ. ಮುಂದಿನ 24 ಗಂಟೆಯಲ್ಲಿ ಬಂಗಾಳ ಕೊಲ್ಲಿಯ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿ ಶ್ರೀಲಂಕಾ ಮತ್ತು ತಮಿಳುನಾಡು ಕರಾವಳಿಯತ್ತ ಚಲಿಸಲಿದೆ.

ಎಲ್ಲೆಲ್ಲಿ ಮಳೆ ಸಂಭವ?: ಆಂಧ್ರಪ್ರದೇಶ, ಸೀಮಾಂಧ್ರ, ಕರ್ನಾಟಕದ ದಕ್ಷಿಣ ಒಳ ನಾಡು, ಕೇರಳ, ಮಾಹೆ, ತಮಿಳುನಾಡು, ಪುದುಚೆರಿ ಮತ್ತು ಕಾರೈಕಲ್​ಗಳಲ್ಲಿ ಐದು ದಿನ ಮಳೆಯಾಗಲಿದೆ. ತಮಿಳುನಾಡಿನ ರಾಮ ನಾಥ ಪುರಂ, ನಾಗಪಟ್ಟಣಂ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರಿ ವರ್ಷಧಾರೆ ಆಗಬಹುದು ಎಂದು ಪ್ರಾದೇಶಿಕ ಹವಾಮಾನ ಇಲಾಖೆ ಎಚ್ಚರಿಸಿದೆ. ಕಾವೇರಿ ನದಿ ಮುಖಜ ಜಿಲ್ಲೆಗಳಲ್ಲಿ ಕೂಡ ಮಳೆಯಾಗಲಿದೆ.

ಬೆಳಗಾವಿ, ಯಾದಗಿರಿಯಲ್ಲಿ ಅಬ್ಬರ: ಬೆಳಗಾವಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಮಂಗಳ ವಾರ ರಾತ್ರಿಯಿಂದ ಮಳೆ ಅಬ್ಬರಿಸುತ್ತಿದೆ. ಇದರಿಂದ ರೈತರು ಹಾಗೂ ವ್ಯಾಪಾರಿಗಳು ಸಮಸ್ಯೆ ಅನುಭವಿಸ ಬೇಕಾಯಿತು. ರಾಜಧಾನಿ ಬೆಂಗಳೂರು ಸುತ್ತಮು ತ್ತಲೂ ಬುಧವಾರ ಸಂಜೆ ವೇಳೆಗೆ ಮಳೆ ಸುರಿದಿದೆ. ಮಳೆಹಾನಿಗೀಡಾದ ಕಾಫಿ ಬೆಳೆಗೆ ಎಕರೆಗೆ 18 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಅಶೋಕ್ ತಿಳಿಸಿದರು.

750 ಕೋಟಿ ರೂ. ಬಿಡುಗಡೆ: ರಾಜ್ಯದಲ್ಲಿ ಮಳೆಹಾನಿಗೆ ಸಂಬಂಧಿಸಿದಂತೆ ಮೊದಲ ಹಾಗೂ ಎರಡನೇ ಹಂತ ಸೇರಿ 750 ಕೋಟಿ ರೂ., ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಲಾಗಿದ್ದು, ಎಲ್ಲ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 679 ಕೋಟಿ ರೂಪಾಯಿ ಇದೆ ಎಂದು ಅಶೋಕ್ ಹೇಳಿದ್ದಾರೆ. ಪರಿಹಾರವು ಪ್ರತಿ ಹೆಕ್ಟೇರ್​ಗೆ ಮಳೆಯಾಶ್ರಿತ ರಾಗಿ ಬೆಳೆಗೆ 6800 ರೂ., ನೀರಾವರಿ ಆಶ್ರಿತವಾದರೆ 13,500 ರೂ., ಹಾಗೂ ತೋಟ ಗಾರಿಕೆ ಬೆಳೆಗೆ 18 ಸಾವಿರ ರೂ., ಸಿಗಲಿದೆ ಎಂದು ತಿಳಿಸಿದರು. ಸರ್ಕಾರದ ನಿರ್ದೇಶನದ ಪ್ರಕಾರ ಸಮೀಕ್ಷೆ ನಡೆಸಲಾಗುತ್ತಿದ್ದು, ಸಮೀಕ್ಷೆಯನ್ನು 10 ದಿನಗಳಲ್ಲಿ ಮುಗಿಸಲಾಗುವುದು ಎಂದು ತಿಳಿಸಿದರು. ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡುವಂತೆ ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಸೂಚಿಸಿದ್ದಾರೆ. ನವೆಂಬರ್​ನಲ್ಲಿ 3.46 ಲಕ್ಷ ಹೆಕ್ಟೇರ್​ನಲ್ಲಿ ಬೆಳೆ ಹಾನಿಯಾಗಿದೆ. ಜುಲೈನಿಂದ ಇಲ್ಲಿಯವರೆಗೆ 10.76 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿರುವ ಮಾಹಿತಿ ಇದೆ ಎಂದರು.

ಎಕರೆಗೆ 20,000 ರೂ. ನೆರವು, ಕೇಂದ್ರಕ್ಕೆ ಮನವಿ: ಬೆಳೆ ನಷ್ಟ ಪರಿಹಾರವಾಗಿ ಎಕರೆಗೆ 20 ಸಾವಿರ ರೂ. ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಮಳೆಗೆ ಮನೆ ಸಂಪೂರ್ಣ ಕುಸಿದರೆ 5 ಲಕ್ಷ ರೂ. ಪರಿಹಾರ ಕಲ್ಪಿಸಲು ಯೋಜನೆ ರೂಪಿಸಿದ್ದು, ಸ್ಥಳದಲ್ಲಿಯೇ 1 ಲಕ್ಷ ರೂ. ಹಾಗೂ ನಂತರ ಒಂದೆರಡು ದಿನಗಳಲ್ಲಿ ಉಳಿದ 4 ಲಕ್ಷ ರೂ. ಪರಿಹಾರ ನೀಡಲು ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಸರ್ಕಾರ 95 ಸಾವಿರ ರೂ. ನೀಡಲಿದ್ದು ಉಳಿದ 4.5 ಲಕ್ಷ ರೂ.ಗಳನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಇನ್ನು ಮನೆಗೆ ನೀರು ನುಗ್ಗಿ ಹಾನಿಯಾದರೆ 10 ಸಾವಿರ ರೂ. ಪರಿಹಾರ ನೀಡಲಾಗುವುದು.

ಬೆಂಗಳೂರಿನಲ್ಲಿ ಮನೆಗಳಿಗೆ ನೀರು ನುಗ್ಗಿದರೆ 10 ಸಾವಿರ ರೂ., ಮನೆ ಬಿದ್ದುಹೋದರೆ 5 ಲಕ್ಷ ರೂ. ಪರಿ ಹಾರ ನೀಡುವುದಾಗಿ ಸಿಎಂ ಘೊಷಿಸಿದ್ದಾರೆ. ಸಂತೋಷ. ನೀರು ನುಗ್ಗಿರುವ ರೈತರ ಹೊಲ, ಗದ್ದೆಗಳಿಗೂ ಎಕರೆಗೆ ತಲಾ 10 ಸಾವಿರ ರೂ. ಪರಿಹಾರ ಘೊಷಿಸಬೇಕು. ವಿಮೆ ಕಟ್ಟಿಸಿಕೊಳ್ಳಲು ತರಾತುರಿ ಸಭೆ ಮಾಡ್ತೀರಲ್ಲ, ಪರಿಹಾರ ಕೊಡಿಸುವಲ್ಲಿ ಏಕೆ ನಿಮ್ಮ ಒತ್ತಡ ಇಲ್ಲ? ನಗರದ ಜನರಿಗೆ 10 ಸಾವಿರ ರೂ. ಕೊಡುವ ವೇಗ ಅನ್ನದಾತನ ಪರವಾಗಿ ಇರಬೇಕು.

| ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

ಆತಂಕದಲ್ಲಿ ರೈತರು: ಕಳೆದೊಂದು ವಾರದಿಂದ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಾದ್ಯಂತ ನಿರಂತರ ಸುರಿಯುತ್ತಿರುವ ಮಳೆಯಿಂದ ಅಪಾರ ಪ್ರಮಾಣದಲ್ಲಿ ಸುಮಾರು 3,262 ಹೆಕ್ಟೇರ್ ಪ್ರದೇಶದ ಭತ್ತ ಬೆಳೆ ಹಾನಿಯಾಗಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್, ವಡಗೇರಾ, ಸುರಪುರ ಹಾಗೂ ಶಹಾಪುರ ತಾಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಯಿಂದ ಭತ್ತ, ಜೋಳ, ಮೆಣಸಿನಕಾಯಿ, ಹತ್ತಿ ಇತರ ಬೆಳೆಗಳು ಹಾನಿಗೀಡಾಗಿವೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರವಾಹ ದಿಂದ ಬಾಧಿತರಾದ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಕುರಿತು ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಈ ಹಿಂದೆ ಇದೇ ವಿಷಯದಲ್ಲಿ ನೀಡಿದ್ದ ನಿರ್ದೇಶನಗಳಲ್ಲಿ ಕೆಲವು ಅಂಶಗಳು ಬಿಟ್ಟು ಹೋಗಿತ್ತು. ಇದೀಗ ಸ್ಪಷ್ಟತೆ ಕೊಡುವ ಪ್ರಯತ್ನ ಮಾಡಲಾಗಿದೆ.

ಪರಿಹಾರದ ಮಾರ್ಗಸೂಚಿ:  

1. ಪ್ರವಾಹದಿಂದ ನೀರು ನುಗ್ಗಿರುವ ಮನೆಗಳ ಗೃಹೋಪ ಯೋಗಿ ವಸ್ತುಗಳು ಹಾಗೂ ಬಟ್ಟೆ ಬರೆ ಹಾನಿಗೆ: 10 ಸಾವಿರ ರೂ.

2. ಶೇ.75ಕ್ಕಿಂತ ಹೆಚ್ಚು ಮನೆ ಹಾನಿ ಯಾಗಿದ್ದರೆ (‘ಎ’ ವರ್ಗ): 5 ಲಕ್ಷ ರೂ.

3. ಶೇ.25-75ರ ಪ್ರಮಾಣದಲ್ಲಿ ಮನೆ ಹಾನಿಯಾಗಿದ್ದರೆ (ಬಿ ವರ್ಗ): 3 ಲಕ್ಷ ರೂ.

4. ಶೇ.15-25 ಮನೆ ಹಾನಿಯಾಗಿದ್ದರೆ (ಸಿ ವರ್ಗ): 50 ಸಾವಿರ ರೂ.

ಮೊದಲ ಕಂತಿನಲ್ಲಿ ‘ಎ’ ಮತ್ತು ‘ಬಿ’ ವರ್ಗದ ಮನೆ ಹಾನಿ ಪ್ರಕರಣಗಳಿಗೆ ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್ ಮಾರ್ಗಸೂಚಿ ಯಂತೆ 96,100 ರೂ. ಪರಿಹಾರವನ್ನು ಜಿಲ್ಲಾಧಿಕಾರಿಗಳು ತಮ್ಮ ಪಿಡಿ ಖಾತೆಯಲ್ಲಿರುವ ಅನುದಾನದಿಂದ ಪಾವತಿಸಲು ಸೂಚಿಸಲಾಗಿದೆ. ‘ಸಿ’ ವರ್ಗದವರಿಗೆ 50 ಸಾವಿರ ರೂ. ಪಾವತಿಸುವಂತೆಯೂ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net