ಮೇನಲ್ಲೇ ರೆಡ್ ಅಲರ್ಟ್ ಸದ್ದು

rain
Published on

ಮಡಿಕೇರಿ:

ಹೆಚ್ಚು ಮಳೆಯ ಕಾರಣಕ್ಕೆ ಸಾಮಾನ್ಯವಾಗಿ ಮಳೆಗಾಲದಲ್ಲಿ ಮಾತ್ರ ಕೊಡಗಿನಲ್ಲಿ ಕೇಳಿ ಬರುತ್ತಿದ್ದ ರೆಡ್ ಅಲರ್ಟ್ ಶಬ್ದ ಈ ವರ್ಷ ಬೇಸಿಗೆಯ ಮೇ ತಿಂಗಳಿನಲ್ಲೇ ಸದ್ದು ಮಾಡುತ್ತಿದೆ. ಪೂರ್ವ ಮುಂಗಾರು ಮಳೆ ಚುರುಕಾಗಿರುವ ಕಾರಣಕ್ಕೆ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆಗಾಲ ನೆನಪಿಸುವಂತೆ ಮಳೆ ಸುರಿಯುತ್ತಿದೆ. ಮೇ 25ರ ತನಕದ ಹವಾಮಾನ ಮುನ್ಸೂಚನೆ ಪ್ರಕಾರ ಜಿಲ್ಲೆಯಲ್ಲಿ ಇದೇ ವಾತಾವರಣ ಮುಂದುವರಿಯಲಿದೆ. ಕೃಷಿ ಕಾರ್ಯವೂ ಚುರುಕಾಗಿದೆ.

ಈ ಬಾರಿ ಅವಧಿಗೂ ಮೊದಲೇ ಮುಂಗಾರು ಆರಂಭವಾಗುವ ಮುನ್ಸೂಚನೆ ಮಧ್ಯೆ ಕೊಡಗಿನಲ್ಲಿ ಕಳೆದ 3 ದಿನಗಳಿಂದ ಮುಂಗಾರು ಮಳೆಯ ರೀತಿಯಲ್ಲೇ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಬರುತ್ತಿದೆ. ಈ ತಿಂಗಳ 27ಕ್ಕೆ ಪ್ರಸಕ್ತ ವರ್ಷದ ಮುಂಗಾರು ಮಾರುತ ಕೇರಳಕ್ಕೆ ಪ್ರವೇಶ ಮಾಡುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ರಾಜ್ಯಕ್ಕೆ ಮೇ 30 ಅಥವಾ ಮೇ 31ಕ್ಕೆ ಕಾಲಿಡುವ ಸಾಧ್ಯತೆ ಇದೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ ಪ್ರಸ್ತುತ ಮಳೆಗಾಲಕ್ಕೆ ಪೂರಕ ವಾತಾವರಣ ಇರುವುದರಿಂದ ಕೇರಳಕ್ಕೆ ಪ್ರವೇಶಿಸಿದ ದಿನವೇ ಕರ್ನಾಟಕದಲ್ಲೂ ಮುಂಗಾರು ಕಾಣಿಸಿಕೊಳ್ಳಬಹುದು ಎಂದು ಹವಾಮಾನ ತಜ್ಞರು ಹೇಳುತ್ತಿದ್ದಾರೆ.

ವಿಶೇಷ ಎಂದರೆ 16 ವರ್ಷಗಳ ಬಳಿಕ ಅವಧಿಗೆ ಮೊದಲೇ ಮುಂಗಾರು ಆಗಮನದ ಸನ್ನಿವೇಶ ನಿರ್ಮಾಣ ಆಗಿದೆ. 2009ರಲ್ಲಿ ಮೇ 23ಕ್ಕೆ ಮುಂಗಾರು ಮಾರುತ ಕೇರಳಕ್ಕೆ ಪ್ರವೇಶ ಪಡೆದುಕೊಂಡಿದ್ದವು. ಇಂಥದ್ದೇ ಸನ್ನಿವೇಶ ಈ ಮತ್ತೆ 2025ರಲ್ಲಿ ನಿರ್ಮಾಣ ಆಗಿದೆ. ಸಾಮಾನ್ಯವಾಗಿ ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ ಕೇರಳದಲ್ಲಿ ಮುಂಗಾರು ಆರಂಭವಾಗುವುದ ವಾಡಿಕೆ. ಕಳೆದ ವರ್ಷ ಜೂ. 4ಕ್ಕೆ ರಾಜ್ಯಕ್ಕೆ ಮುಂಗಾರು ಕಾಲಿಟ್ಟಿತ್ತು. ಈ ಬಾರಿ ಕೇರಳಕ್ಕೆ ಮೇ 27ಕ್ಕೆ ಮುಂಗಾರು ಆಗಮಿಸುತ್ತಿದ್ದು, ಕರ್ನಾಟದಲ್ಲಿ ಮೇ 30ರ ಒಳಗಡೆ ಮುಂಗಾರು ಮಾರುತಗಳ ಪ್ರಭಾವ ಕಾಣಿಸಿಕೊಳ್ಳುವ ಸಾಧ್ಯತೆ ಅಧಿಕವಾಗಿದೆ.

ಮುಂಗಾರು ಆಗಮನದ ಲೆಕ್ಕಾಚಾರದ ಮಧ್ಯೆ ಪೂರ್ವ ಮುಂಗಾರು ಮಳೆಯ ಅಬ್ಬರ ಕೊಡಗಿನಲ್ಲಿ ಜೋರಾಗಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಮೇ 21ರಿಂದ ಮೇ 25 ತನಕ ಹವಾಮಾನ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣದ ಜತೆಗೆ ಭಾರೀ ಮಳೆ ಬರುವ ಸಂಭವವಿದೆ. ಹಾಗಾಗಿಯೇ ಸೋಮವಾರದಿಂದಲೇ (ಮೇ19) ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜೂನ್, ಜುಲೈ, ಆಗಸ್ಟ್ ತಿಂಗಳ ಮಳೆಗಾಲದ ಅವಧಿಯಲ್ಲಿ ರೆಡ್ ಅಲರ್ಟ್ ಘೋಷಣೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಿಗೆ ರಜೆ ಕೊಡುವುದು ಸಾಮಾನ್ಯ ಸಂಗತಿ. ಆದರೆ ಈ ವರ್ಷ ಮೇ ತಿಂಗಳಿನಲ್ಲೂ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಜೋರು ಮಳೆ ಬರುವ ಸಾಧ್ಯತೆ ಕಾರಣಕ್ಕೆ ಈ ವರ್ಷ ಏ.14ಕ್ಕೂ ಕೊಡಗಿನಲ್ಲಿ ರೆಡ್ ಅಲರ್ಟ್ ಘೋಷಣೆ ಆಗಿತ್ತು. ಇದಕ್ಕೂ ಮೊದಲು 2024ರ ಡಿ. 2 ಕ್ಕೂ ಮಳೆಗಾಲ ಅಲ್ಲದ ಅವಧಿಯಲ್ಲಿ ರೆಡ್ ಅಲರ್ಟ್ನ ಎಚ್ಚರಿಕೆ ಕೊಡಲಾಗಿತ್ತು. ಹಾಗಾಗಿ ಈ ಬಾರಿ ಬೇಸಿಗೆಯಲ್ಲೂ ಉತ್ತಮ ಮಳೆಯಾಗಿದ್ದ ಕಾರಣ ಕಾವೇರಿ, ಹಾರಂಗಿ, ಲಕ್ಷö್ಮಣತೀರ್ಥ, ಹೇಮಾವತಿ ಸೇರಿದಂತೆ ಜಿಲ್ಲೆಯ ನದಿಗಳು ಜೀವಂತಿಕೆ ಉಳಿಸಿಕೊಂಡಿವೆ. ಕಳೆದ ವರ್ಷದ ಬೇಸಿಗೆಯಲ್ಲಿ ಈ ನದಿಗಳಲ್ಲಿ ನೀರಿನ ಹರಿವು ಸ್ತಬ್ಧವಾಗಿ ನದಿ ಪಾತ್ರ ಬರಡಾಗಿತ್ತು.

ಪೂರ್ವ ಮುಂಗಾರು ಮಳೆ ಚುರುಕಾಗಿರುವುದರಿಂದ ವಾತಾವರಣದಲ್ಲೂ ಏಕಾಏಕಿ ಬದಲಾವಣೆ ಆಗಿದೆ. ಬಿರುಬಿಸಿಲು, ಸೆಕೆಗೆ ತತ್ತರಿಸಿದ ಜಿಲ್ಲೆಯ ಜನತೆಗೆ ಈಗ ತಂಪಿನ ಅನುಭವ ಆಗುತ್ತಿದೆ. ಮಡಿಕೇರಿ ಸೇರಿದಂತೆ ಹಲವೆಡೆ ಹಗಲಿನಲ್ಲೇ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದೆ. ಗರಿಷ್ಠ ಉಷ್ಣಾಂಶ 27 -29 ಡಿ.ಸೆ. ಮತ್ತು ಕನಿಷ್ಠ ಉಷ್ಣಾಂಶ 21-22 ಡಿ.ಸೆ. ದಾಖಲಾಗುವ ಸಾಧ್ಯತೆಯಿದೆ. ಗಾಳಿಯಲ್ಲಿರುವ ತೇವಾಂಶದ ಪ್ರಮಾಣದಲ್ಲೂ ಏರಿಕೆ ಆಗಿದೆ. ಬೆಳಗಿನ ಗಾಳಿಯ ತೇವಾಂಶ ಶೇ. 95-98ರ ತನಕ ಇದ್ದರೆ, ಮಧ್ಯಾಹ್ನದ ಸಮಯದಲ್ಲಿ ಗಾಳಿಯ ತೇವಾಂಶ ಶೇ. 61-63 ವರೆಗೆ ಇರಲಿದ್ದು, ಗಾಳಿ ಗಂಟೆಗೆ 10-16 ಕಿಲೋಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆ ಇರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜಿಲ್ಲೆಯಲ್ಲಿ ಬುಧವಾರ ಅತೀ ಹೆಚ್ಚು ಅಂದರೆ ಸರಾಸರಿ 80 ಮಿಮೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಗುರುವಾರ (ಮೇ22) 75 ಮಿಮೀ, ಶುಕ್ರವಾರ (ಮೇ23) 13 ಮಿಮೀ, ಮೇ 24ಕ್ಕೆ 12 ಮಿಮೀ ಹಾಗೂ ಮೇ 25ಕ್ಕೆ 25 ಮಿಮೀಗಳಷ್ಟು ಸರಾಸರಿ ಮಳೆಯಾಗುವ ಸಾಧ್ಯತೆ ಇರುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ.

ಈಗ ಸುರಿಯುತ್ತಿರುವ ಪೂರ್ವ ಮುಂಗಾರು ಮಳೆ ಮುಂಗಾರು ಹಂಗಾಮಿನ ಕೃಷಿ ಸಿದ್ಧತೆಗೆ ಪೂರಕ ವಾತಾವರಣ ಕಲ್ಪಿಸಿದೆ. ಕೆಲವೆಡೆ ಈಗಾಗಲೇ ಭತ್ತದ ಕೃಷಿ ಕೆಲಸಕ್ಕೆ ಪೂರ್ವಭಾವಿ ಕೆಲಸಗಳನ್ನು ಆರಂಭಿಸಲಾಗಿದೆ. ಮುಂದಿನ ಒಂದು ವಾರ ಕಾಲ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಪ್ರತಿದಿನ ಮಳೆಯಾಗುವ ಸಾಧ್ಯತೆ ಇದ್ದು, ನೀರಾವರಿ ಮತ್ತು ಸಿಂಪಡಣೆಯನ್ನು ತಪ್ಪಿಸಬೇಕು. ಕೊಯ್ಲು ಮಾಡಿದ ಉತ್ಪನ್ನಗಳನ್ನು ಒಣಗಿಸಿ ಸಂಗ್ರಹಿಸಬೇಕು. ಶಿಲೀಂಧ್ರ ರೋಗಗಳ ಬಗ್ಗೆ ಎಚ್ಚರದಿಂದ ಇರಬೇಕು. ಜಾನುವಾರು ಆಶ್ರಯಗಳನ್ನು ರಕ್ಷಿಸಬೇಕು ಎಂದು ಕೃಷಿ ಹವಾಮಾನ ಕ್ಷೇತ್ರದ ತಜ್ಞರು ಕೃಷಿಕರಿಗೆ ಸಲಹೆ ನೀಡಿದ್ದಾರೆ. ಕಾಫಿಯಲ್ಲಿ ಕಾಯಿ ಕೊರಕದ ಬಗ್ಗೆ ಜಾಗೃತೆ ವಹಿಸುವಂತೆಯೂ, ಏಲಕ್ಕಿಯಲ್ಲಿ ಶಿಲೀಂದ್ರ ರೋಗಗಳ ಕಡೆಗೆ ಗಮನ ಹರಿಸುವಂತೆಯೂ ಸೂಚನೆ ನೀಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಮುಂದಿನ ಒಂದು ವಾರ ಕಾಲ ಭಾರಿ ಮಳೆ ಆಗಲಿದೆ. ರೈತರು ಹೊಲಗಳಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಬೇಕು. ಮಳೆಗಾಲದ ದಿನಗಳಲ್ಲಿ ರಾಸಾಯನಿಕಗಳನ್ನು ಸಿಂಪಡಿಸುವುದನ್ನು ತಪ್ಪಿಸಬೇಕು. ಗಾಳಿಯಿಂದ ಸಸ್ಯಗಳು ನೆಲಕ್ಕುರುಳದಂತೆ ತಡೆಯಲು ಬಾಳೆ ಸೇರಿದಂತೆ ಇತರ ಗಿಡಗಳಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಶಿಲೀಂಧ್ರ ರೋಗಗಳನ್ನು ತಡೆಯಲು ಕಾಫಿ ಮತ್ತು ಮೆಣಸಿನ ಬೆಳೆಗಳನ್ನು ಸೂಕ್ತ ಮೇಲ್ವಿಚಾರಣೆ ನಡೆಸಬೇಕು. ಮಳೆಯ ನಂತರ ಸಿಂಪಡಣೆಗಳ ಬಗ್ಗೆ ಯೋಜನೆ ಮಾಡಿಕೊಳ್ಳಬೇಕು.

ಡಾ. ಜಿ.ವಿ. ಸುಮಂತ್ ಕುಮಾರ್, ತಾಂತ್ರಿಕ ಅಧಿಕಾರಿ, ಕೃಷಿ ಹವಾಮಾನ ಕ್ಷೇತ್ರ ವಿಭಾಗ, ನಾಗನಹಳ್ಳಿ, ಮೈಸೂರು

ಈಗ ಮಳೆ ಬೀಳುತ್ತಿರುವುದರಿಂದ ಬೆಳೆಗಳಿಗೆ ಶಿಲೀಂದ್ರ ರೋಗಗಳು ಬಾಧಿಸುವ ಸಾಧ್ಯತೆ ಹೆಚ್ಚು. ಇದರ ಜತೆಗೆ ಜಿಲ್ಲೆಯಲ್ಲಿ ಈಗ ಶೀಘ್ರ ಸೊರಗು ರೋಗ ಮತ್ತು ಹಳದಿ ರೋಗದ ಹಾವಳಿ ಹೆಚ್ಚಾಗಿದೆ. ಇಂಥ ಸಂದರ್ಭದಲ್ಲಿ ಈಗ ಮಣ್ಣು ಹದಕ್ಕೆ ಬಂದಿರುವುದರಿAದ ರೈತರು ಅರ್ಕಾ ಸೂಕ್ಷಾö್ಮಣು ಜೀವಿಗಳ ಸಮೂಹ ಎನ್ನುವ ಜೈವಿಕ ಗೊಬ್ಬರನ್ನು ಕಾಫಿ ಮತ್ತು ಕರಿಮೆಣಸು ಬೆಳೆಗೆ ಕೊಡಬಹುದಾಗಿ. ಮಳೆ ಬೀಳುತ್ತಿರುವುದರಿಂದ ಇದು ಗಿಡಕ್ಕೆ ಪೂರಕವಾಗಲಿದೆ.

ಡಾ. ವೀರೇಂದ್ರ ಕುಮಾರ್, ಸಸ್ಯ ಸಂರಕ್ಷಣಾ ತಜ್ಞ, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net