

ಬೆಂಗಳೂರು: ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣವನ್ನು ಭೇದಿಸಿರುವ ಬೆಂಗಳೂರು ನಗರ ರೈಲ್ವೆ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ರಾಮನಗರ ಟೌನ್ ಟಿಪ್ಪುನಗರ ನಿವಾಸಿಗಳಾದ ಸೈಯದ್ ಇಲಿಯಾಸ್(೨೦)ಮತ್ತು ಜಹೀರ್ ಅಲಿಯಾಸ್ ಕಾಲು(೨೦) ಬಂಧಿತರು.
ಆರೋಪಿಗಳು ಜ.೨೦ರ ರಾತ್ರಿ ರಾಮನಗರ ರೈಲು ನಿಲ್ದಾಣ ಸಮೀಪ ರೈಲು ಹಳಿ ಬಳಿ ತಮ್ಮದೇ ಏರಿಯಾದ ಅರ್ಬಾಜ್ ಪಾಷ(೨೪) ಎಂಬಾತನ ಮೇಲೆ ಹಲ್ಲೆ ಮಾಡಿ ಬಳಿಕ ತಲೆಯ ಮೇಲೆ ಸಿಮೆಂಟ್ ಕಾಂಕ್ರಿಟ್ ಕಲ್ಲು ಎತ್ತಿಹಾಕಿ ಕೊಲೆಗೈದು ಶವವನ್ನು ರೈಲ್ವೆ ಟ್ರಾಕ್ ಬಳಿ ಬಿಸಾಡಿ ಹೋಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ತಂಗಿ ಚುಡಾಯಿಸಿದ್ದಕ್ಕೆ ಕೊಲೆ:
ಕೊಲೆಯಾದ ಅರ್ಬಾಜ್ ಮತ್ತು ಆರೋಪಿಗಳು ಒಂದೇ ಏರಿಯಾ ನಿವಾಸಿಗಳಾಗಿದ್ದಾರೆ. ಮೂವರು ರೇಷ್ಮೆ ನೇಯುವ ಕೆಲಸ ಮಾಡಿಕೊಂಡಿದ್ದರು. ಮೂವರು ಐದಾರು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದರು. ಈ ನಡುವೆ ಅರ್ಬಾಜ್, ಜಹೀರ್‌ನ ೧೭ ವರ್ಷದ ತಂಗಿಯನ್ನು ಚುಡಾಯಿಸುವುದು, ಶಾಲೆ ಬಳಿ ತೆರಳಿ ರೇಗಿಸುತ್ತಿದ್ದ. ಈ ವಿಚಾರವಾಗಿ ಶಾಲೆ ಆಡಳಿತ ಮಂಡಳಿ ಜಹೀರ್‌ನ ತಂಗಿಯನ್ನು ಶಾಲೆಯಿಂದ ಬಲವಂತವಾಗಿ ಕಳುಹಿಸಿದ್ದರು. ಅಲ್ಲದೇ ಅರ್ಬಾಜ್, ಜಹೀರ್‌ನ ತಾಯಿಯ ಚಾರಿತ್ರ್ಯದ ಬಗ್ಗೆ ಏರಿಯಾದಲ್ಲಿ ಲಘುವಾಗಿ ಮಾತನಾಡುತ್ತಿದ್ದ. ಈ ವಿಚಾರ ಗೊತ್ತಾಗಿ ಜಹೀರ್ ಕೋಪಗೊಂಡಿದ್ದ. ಸ್ನೇಹಿತ ಸೈಯದ್ ಇಲಿಯಾಸ್ ಜತೆಗೆ ಈ ವಿಚಾರ ಹಂಚಿಕೊಂಡು ಬಳಿಕ ಇಬ್ಬರೂ ಅರ್ಬಾಜ್‌ಗೆ ತಕ್ಕಪಾಠ ಕಲಿಸಲು ಸಂಚು ರೂಪಿಸಿದ್ದರು.
ಸಿಮೆಂಟ್ ಕಾಂಕ್ರಿಟ್ ಇಟ್ಟಿಗೆ ಎತ್ತಾಕಿ ಹತ್ಯೆ:
ಆರೋಪಿಗಳು ಜ.೨೦ರಂದು ರಾತ್ರಿ ಅರ್ಬಾಜ್ ಮೊಬೈಲ್‌ಗೆ ಕರೆ ಮಾಡಿ ಮದ್ಯ ಕುಡಿಯಲು ಆಹ್ವಾನಿಸಿದ್ದರು. ಬಳಿಕ ಮೂವರು ರಾಮನಗರದ ಬಾರ್‌ವೊಂದರಲ್ಲಿ ಮದ್ಯ ಸೇವಿಸಿದ್ದಾರೆ. ಈ ವೇಳೆ ಜಹೀರ್ ತನ್ನ ತಂಗಿ ಮತ್ತು ತಾಯಿಯ ವಿಚಾರ ಪ್ರಸ್ತಾಪಿಸಿ ಅರ್ಬಾಜ್‌ನನ್ನು ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಸಣ್ಣ ಜಗಳವಾಗಿದೆ. ಬಳಿಕ ಜಹೀರ್ ಮತ್ತು ಇಲಿಯಾಸ್ ಇಬ್ಬರು ಸೇರಿ ಅರ್ಬಾಜ್‌ನನ್ನು ರಾಮನಗರದ ರೈಲು ನಿಲ್ದಾಣ ಸಮೀಪದ ರೈಲ್ವೆ ಹಳಿ ಬಳಿ ಕರೆದೊಯ್ದು ಹಾಕಿ ಸ್ಟಿಕ್‌ನಿಂದ ಹಲ್ಲೆ ಮಾಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೆ, ಅಲ್ಲೇ ಬಿದ್ದಿದ್ದ ಸಿಮೆಂಟ್ ಕಾಂಕ್ರಿಟ್ ಇಟ್ಟಿಗೆಯನ್ನು ಅರ್ಬಾಜ್ ತಲೆಗೆ ಮೇಲೆ ಎತ್ತಿ ಹಾಕಿ ಕೊಲೆಗೈದು ಪರಾರಿಯಾಗಿದ್ದರು. ಆರೋಪಿಗಳು ಅರ್ಬಾಜ್‌ನ ಕೊಲೆ ಮಾಡಿದ ಬಳಿಕ ಮನೆಗೆ ತೆರಳಿ ಬಟ್ಟೆ ಬದಲಿಸಿಕೊಂಡಿದ್ದರು. ಬಳಿಕ ಪೆಟ್ರೋಲ್ ತೆಗೆದುಕೊಂಡು ಅರ್ಬಾಜ್‌ನ ಮೃತದೇಹದ ಮೇಲೆ ಸುರಿದು ಬೆಂಕಿ ಹಚ್ಚಿ ಸುಡಲು ಪ್ಲಾನ್ ಮಾಡಿದ್ದರು. ಆದರೆ, ಕೊನೆ ಕ್ಷಣದಲ್ಲಿ ಆ ಪ್ಲಾನ್‌ನಿಂದ ಹಿಂದೆ ಸರಿದಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಸಿಡಿಆರ್ ಆಧರಿಸಿ ಆರೋಪಿಗಳ ಪತ್ತೆ:
ಜ.೨೧ರಂದು ಮಧ್ಯಾಹ್ನ ೩.೩೦ರ ಸುಮಾರಿಗೆ ರಾಮನಗರ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ರೈಲ್ವೆ ಹಳಿ ಪಕ್ಕ ಅಪರಿಚಿತ ಮೃತದೇಹ ಬಿದ್ದಿರುವ ಬಗ್ಗೆ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ ಪೊಲೀಸರಿಗೆ ಇದು ಕೊಲೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದರಿಂದ ಮುಖದ ಗುರುತು ಪತ್ತೆಯಾಗಿಲ್ಲ. ಬಳಿಕ ಮೃತ ವ್ಯಕ್ತಿಯ ಪ್ಯಾಂಟಿನ ಜೇಬು ಪರಿಶೀಲಿಸಿದಾಗ ಮೊಬೈಲ್ ಸಂಖ್ಯೆ ಬರೆದಿದ್ದ ಚೀಟಿಯೊಂದು ಪತ್ತೆಯಾಗಿದೆ. ಆ ಚೀಟಿಯ ತೆಗೆದು ಆ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ ಕೊಲೆಯಾದ ವ್ಯಕ್ತಿ ಅರ್ಬಾಜ್ ಎಂಬುದು ಗೊತ್ತಾಗಿದೆ.
ಬಳಿಕ ಅರ್ಬಾಜ್ ಮೊಬೈಲ್ ಕರೆಗಳ ಸಿಡಿಆರ್ ತೆಗೆದು ಪರಿಶೀಲಿಸಿದಾಗ ಜ.೨೦ರ ರಾತ್ರಿ ಜಹೀರ್ ಮತ್ತು ಇಲಿಯಾಸ್ ಕರೆ ಮಾಡಿರುವುದು ಗೊತ್ತಾಗಿದೆ. ಬಳಿಕ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ಪ್ರಕರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.