

ತ್ರಿಶೂರ್ (ಕೇರಳ): ಎಲ್ಲಾ ಮಕ್ಕಳಲ್ಲಿಯೂ ಪ್ರತಿಭೆ ಇದ್ದೇ ಇರುತ್ತದೆ. ಕೆಲವರಿಗೆ ಆ ಪ್ರತಿಭೆಯನ್ನು ಹೊರಜಗತ್ತಿಗೆ ತೋರಿಸುವ ಅವಕಾಶ ಸಿಕ್ಕರೆ, ಇನ್ನು ಹಲವರಿಗೆ ಅವಕಾಶ ಸಿಗದೇ ಪ್ರತಿಭೆ ಕಮರಿ ಹೋಗುತ್ತದೆ.
ಅದರೆ ಇಲ್ಲೊಬ್ಬ 12 ವರ್ಷದ ವಿದ್ಯಾರ್ಥಿಯ ಪ್ರತಿಭೆ, ಸೃಜನಶೀಲತೆಗೆ ಕೇಂದ್ರ ರೈಲ್ವೆ ಸಚಿವಾಲಯವೇ ತಲೆಬಾಗಿದೆ.
ಹೌದು. 12 ವರ್ಷದ ಬಾಲಕ ತ್ರಿಶೂರ್‌ನ ಅದ್ವೈತ್ ಕೃಷ್ಣನ ಪ್ರತಿಭೆಯೇ ಅಂಥದ್ದು. ನ್ಯೂಸ್ ಪೇಪರ್‌ಗಳನ್ನು ಬಳಸಿ ರೈಲಿನ ಮಾದರಿಯನ್ನು ರೂಪಿಸಿರುವ ಅದ್ವೈತ್‌ನ ಪ್ರತಿಭೆಗೆ ಕೇಂದ್ರ ಸರ್ಕಾರ ಶಹಬ್ಬಾಸ್‌ಗಿರಿ ಕೊಟ್ಟಿದೆ. ಕೇವಲ ಪತ್ರಿಕೆಗಳಿಂದ ಇಂಥದ್ದೊಂದು ಅದ್ಭುತ ಸೃಷ್ಟಿಯಾಗಬಲ್ಲದೇ ಎಂದು ಯಾರೂ ಊಹಿಸಲು ಸಾಧ್ಯವಿರದಂಥ ರೀತಿಯಲ್ಲಿ ಕಲಾಕೃತಿ ಮೂಡಿಬಂದಿದೆ ಎಂದು ಗಣ್ಯಾತಿಗಣ್ಯರು ಈ ಬಾಲಕನನ್ನು ಹಾಡಿ ಕೊಂಡಾಡಿದ್ದಾರೆ.
ಅದ್ವೈತ್, ತ್ರಿಶೂರ್‌ದಲ್ಲರಿವ ಸಿಎನ್‌ಎನ್ ಬಾಯ್ಸ್ ಹೈಸ್ಕೂಲ್‌ನಲ್ಲಿ ಏಳನೇ ತರಗತಿ ಓದುತ್ತಿದ್ದಾನೆ. ಮೊದಲಿನಿಂದಲೂ ಪಠ್ಯೇತರ ಚಟುವಟಿಕೆಗಳಲ್ಲಿಯೂ ಅಪಾರ ಆಸಕ್ತಿ ಹೊಂದಿದ್ದ ಈ ಬಾಲಕನಿಗೆ ಪತ್ರಿಕೆ ಬಳಸಿ ರೈಲನ್ನು ತಯಾರಿಸಿದರೆ ಹೇಗೆ ಎಂಬ ಯೋಚನೆ ಹೊಳೆದಿದೆ.
ಅದಕ್ಕಾಗಿ ಈಗ ಪತ್ರಿಕೆಗಳ 33 ಪುಟ ಮತ್ತು 10 ಎ4 ಹಾಳೆಗಳನ್ನು ಬಳಸಿ ಈ ಆಕರ್ಷಕ ರೈಲು ಮಾದರಿಯನ್ನು ತಯಾರಿಸಿದ್ದಾನೆ. ಇದಕ್ಕಾಗಿ ಈತ ವ್ಯಯಿಸಿದ್ದು ಕೇವಲ ಮೂರೇ ಮೂರು ದಿನ. ಲಾಕ್‌ಡೌನ್ ಅವಧಿಯ ಮೂರು ದಿನಗಳನ್ನು ಅದ್ವೈತ್ ಈ ಮಾದರಿ ತಯಾರಿಗೆ ಬಳಸಿಕೊಂಡಿದ್ದಾನೆ.
ಈತನ ಕಲಾಕೃತಿಯನ್ನು ರೈಲ್ವೆ ಸಚಿವಾಲಯ ತನ್ನ ಫೇಸ್‌ಬುಕ್, ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.