

ಕೋಲ್ಕತ್ತಾ: ಕಾಂಚನಜುಂಗಾ ಎಕ್ಸ್ಪ್ರೆಸ್ಗೆ ಗೂಡ್ಸ್ ರೈಲು ಅಪಘಾತಕ್ಕೀಡಾದ ಸ್ಥಳಕ್ಕೆ ಭೇಟಿ ನೀಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಹೋಗುವ ಮಾರ್ಗ ಕಿರಿದಾಗಿದ್ದು ಬೈಕ್ನ ಹಿಂದೆ ಕೂತು ಅಶ್ವಿನಿ ವೈಷ್ಣವ್ ಘಟನಾ ಸ್ಥಳ ತಲುಪಿದ್ದಾರೆ. ಈ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಂದು (ಸೋಮವಾರ) ಬೆಳಗ್ಗೆ ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಜಿಲ್ಲೆಯ ರಂಗಪಾಣಿ ಬಳಿ ಕಾಂಚನಜುಂಗಾ ಎಕ್ಸ್ಪ್ರೆಸ್ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದಿದ್ದು, ಈ ರೈಲು ದುರಂತದಲ್ಲಿ 15 ಜನ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ನಿಲ್ದಾಣ ಸಮೀಪ ಸಿಗ್ನಲ್‌ಗಾಗಿ ಕಾಯುತ್ತಿದ್ದ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲಿಗೆ ಹಿಂದಿನಿಂದ ಗೂಡ್ಸ್ ರೈಲು ಬಂದು ಡಿಕ್ಕಿ ಹೊಡೆದಿದೆ. ಘಟನೆಯಿಂದ ರೈಲಿನ ಎರಡು ಬೋಗಿಗಳಿಗೆ ಭಾರೀ ಹಾನಿಯಾಗಿದೆ. ಪ್ರಯಾಣಿಕರ ಸಾವು ನೋವು ಹೆಚ್ಚಿನ ಸಂಖ್ಯೆಯಲ್ಲಿರುವ ಸಾಧ್ಯತೆಗಳಿದ್ದು, ಸದ್ಯ ರಕ್ಷಣಾ ಕಾರ್ಯಾಚರಣೆಯು ನಡೆಯುತ್ತಿದೆ.
ಮಾನವ ನಿರ್ಲಕ್ಷ್ಯ ಕಾರಣ?: ಮೇಲ್ನೋಟಕ್ಕೆ ಈ ಅಪಘಾತಕ್ಕೆ ಮಾನವ ದೋಷವನ್ನು ಕಾರಣವೆಂದು ಸೂಚಿಸುತ್ತದೆ. ಸಿಗ್ನಲ್ ನಿರ್ಲಕ್ಷ್ಯವಾಗಿರಬಹುದು. ರೈಲ್ವೆ ಕವಚ ಯೋಜನೆಯನ್ನು ವಿಸ್ತರಿಸುವ ಅಗತ್ಯವಿದೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಸಿಇಒ ಜಯ ವರ್ಮ ಸಿನ್ಹಾ ತಿಳಿಸಿದ್ದಾರೆ.
ಮೃತರಿಗೆ ಪ್ರಧಾನಿ ಮೋದಿ ಪರಿಹಾರ: ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ರೈಲ್ವೆ ಅಪಘಾತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಮೃತರ ಸಂಬಂಧಿಕರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ, ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.