ಹಳೆ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ರೈಲ್ವೆ ನೌಕರರ ಉಪವಾಸ ಸತ್ಯಾಗ್ರಹ

9-RNR-03
Published on

ರಾಣೆಬೆನ್ನೂರ: ಹೊಸ ಪಿಂಚಣಿ ಯೋಜನೆ ಜಾರಿ ಕೈಬಿಟ್ಟು ಹಳೆ ಪಿಂಚಣಿ ಪದ್ಧತಿಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ನಗರದ ರೈಲ್ವೆ ನಿಲ್ದಾಣದ ಬಳಿ ಸೌಥ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯುನಿಯನ್ ತಾಲೂಕು ಘಟಕದ ವತಿಯಿಂದ ಮಂಗಳವಾರ ಉಪವಾಸ ಸತ್ಯಾಗ್ರಹ ನಡೆಸಲಾಯಿತು.
ರೈಲ್ವೆ ಇಲಾಖೆಯ 2004ರಿಂದ ಇತ್ತೀಚೆಗೆ ನೇಮಕಗೊಂಡ ಎಲ್ಲ ನೌಕರರು ಕರ್ತವ್ಯ ಬಹಿಷ್ಕರಿಸಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡರು.
ಸಂಘಟನೆಯ ತಾಲೂಕು ಅಧ್ಯಕ್ಷ ಸಂತೋಷ ಯಾದವಾಡ ಮಾತನಾಡಿ, ಕೇಂದ್ರ ಸರ್ಕಾರ ಹೊಸ ಪಿಂಚಣಿ ಪದ್ಧತಿ ಜಾರಿಗೊಳಿಸಿದ ಹಿನ್ನೆಲೆಯಲ್ಲಿ 2004ರಿಂದ ನೇಮಕಗೊಂಡ ನೌಕರರಿಗೆ ಅನ್ಯಾಯವಾಗಲಿದೆ. ಆದ್ದರಿಂದ ಸರ್ಕಾರ ಕೂಡಲೇ ಹೊಸ ಪಿಂಚಣಿ ಪದ್ಧತಿ ಕೈಬಿಟ್ಟು ಹಳೆ ಪಿಂಚಣಿ ಪದ್ಧತಿಯನ್ನು ಮುಂದು ವರಿಸಬೇಕು.
ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿರಲಿದೆ. ಇದೀಗ ಐದು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಆರಂಭಿಸಿದ್ದೇವೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನದಲ್ಲಿ ತೀವ್ರತರನಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘಟನೆಯ ಕಾರ್ಯದರ್ಶಿ ಮಾಲತೇಶ ಟಿ.ಎಲ್., ಕೆ. ಮಂಜುನಾಥ, ಕರಬಸಪ್ಪ ಕಲ್ಲಾಪುರ, ಹಾಲಪ್ಪ ಪಿ., ಮಾಲಾ ಎಂ.ಜಿ., ದೀಲಿಪ್ ದೇಸೂರ, ಚಂದ್ರಶೇಖರ ಚನ್ನೂರ, ಚಂದ್ರಶೇಖರ ಲಮಾಣಿ, ರೂಪಾ ಜಿ., ಸುಚಿತ್ರಾ ಎಂ.ಬಿ., ಮಂಜುಶ್ರೀ ಆರ್. ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net