ಡೆತ್​ನೋಟ್​ ಬರೆದಿಟ್ಟು ಯುವಕ ನಾಪತ್ತೆ ಕೇಸ್​: 48 ಗಂಟೆ ಕಳೆದರೂ ಸಿಗದ ಸುಳಿವು, ಮಹಿಳಾ PSI ವಿರುದ್ಧ ಆಕ್ರೋಶ

Geethanjali Shinde
Published on

ರಾಯಚೂರು: ಮಹಿಳಾ ಪಿಎಸ್​ಐ ಕಿರುಕುಳ ತಾಳಲಾರದೇ ಡೆತ್​ನೋಟ್​ ಬರೆದಿಟ್ಟು ನಾಪತ್ತೆಯಾಗಿರುವ ಯುವಕ, 48 ಗಂಟೆ ಕಳೆದರೂ ಇನ್ನೂ ಪತ್ತೆಯಾಗದಿರುವುದು ಕುಟುಂಬಸ್ಥರನ್ನು ಆತಂಕಕ್ಕೆ ದೂಡಿದೆ.

ಸಿರವಾರ ಠಾಣೆಯ ಪಿಎಸ್​ಐ ಗೀತಾಂಜಲಿ ಶಿಂಧೆ ಅವರು ಮೂರು ತಿಂಗಳಿಂದ ವಿನಾಕಾರಣ ಠಾಣೆಗೆ ಕರೆಸಿ ನನಗೆ ಕಿರುಕುಳ ನೀಡುತ್ತಿದ್ದರು ಎಂದು ಸಿರವಾರದ ತಾಯಣ್ಣ ಆರೋಪ ಮಾಡಿದ್ದು, ನಿನ್ನೆ ಡೆತ್​ನೋಟ್​ ಬರೆದು ನಾಪತ್ತೆಯಾಗಿದ್ದಾನೆ. ಆದರೆ, 48 ಗಂಟೆಗಳು ಕಳೆದರೂ ಆತನ ಸುಳಿವು ಮಾತ್ರ ಇನ್ನು ಸಿಕ್ಕಿಲ್ಲ.

ತಾಯಣ್ಣ ಪತ್ತೆಯಾಗದಿರುವುದು ಆತನ ಪಾಲಕರನ್ನು ಆತಂಕಕ್ಕೆ ದೂಡಿದೆ. ಮಗನನ್ನು ಹುಡುಕಿ ಕೊಡುವಂತೆ ಪಾಲಕರು ಕಣ್ಣೀರು ಹಾಕುತ್ತಿದ್ದಾರೆ. ನಮ್ಮ ಮಗನಿಗೆ ಏನಾದ್ರೂ ಆದ್ರೆ ಅದಕ್ಕೆ ನೇರ ಹೊಣೆ ಪಿಎಸ್ಐ ಗೀತಾಂಜಲಿ ಶಿಂಧೆ ಎಂದು ತಾಯಣ್ಣನ ಪಾಲಕರು ಆರೋಪ ಮಾಡುತ್ತಿದ್ದಾರೆ.

ಸಂಬಂಧಿಕರ ಜಮೀನಿನ ಭತ್ತ ಕಟಾವು ಮಾಡಿದ್ದ ಆರೋಪವನ್ನು ತಾಯಣ್ಣ ಹೊತ್ತಿದ್ದ. ದೂರು ನೀಡಿದ ಹಿನ್ನೆಲೆಯಲ್ಲಿ ನಿನ್ನೆ (ಡಿ.02) ತಾಯಣ್ಣನನ್ನು ಪಿಎಸ್​ಐ ಗೀತಾಂಜಲಿ ಶಿಂಧೆ ಠಾಣೆಗೆ ಕರೆಸಿದ್ದರು. ಬಹಳ ಹೊತ್ತು ಲಾಕಪ್​ನಲ್ಲಿ ಕೂರಿಸಿದ್ದರಿಂದ ಮನ‌ನೊಂದು ನಾಪತ್ತೆತಾಗಿರುವುದಾಗಿ ಯುವಕ ಡೆತ್​ನೋಟ್​ನಲ್ಲಿ ಉಲ್ಲೇಖಸಿದ್ದಾನೆ. ಸದ್ಯ ನಾಪತ್ತೆಯಾಗಿರುವ ತಾಯಣ್ಣನ ವಿರುದ್ಧ 4 ಕ್ರಿಮಿನಲ್ ಹಾಗೂ 5 ಸಿವಿಲ್ ಪ್ರಕರಣಗಳಿರುವ ಮಾಹಿತಿ ಇದೆ.

ನಾನು ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇದಕ್ಕೆ ಪಿಎಸ್​ಐ ಗೀತಾಂಜಲಿ ಶಿಂಧೆ ಅವರೇ ಕಾರಣ. ನನಗೆ ನಿರಂತರ ಕಿರುಕುಳ ನೀಡುತ್ತಿದ್ದು, ದೌರ್ಜನ್ಯ ಎಸಗುತ್ತಿದ್ದಾರೆ. ಇದರಿಂದ ಭಯಭೀತನಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನಗೆ ಹೊರಗಡೆ ಹೋದಾಗಲೆಲ್ಲ ಜೀಪ್​ ನಿಲ್ಲಿಸಿ, ನನಗೆ ಹೊಡೆದಂತಹ ಅನೇಕ ಪ್ರಸಂಗಗಳು ಇವೆ. ಅದನ್ನು ಈವರೆಗೂ ನಾನು ಯಾರಿಗೂ ಹೇಳಿಕೊಂಡಿರಲಿಲ್ಲ. ಇದೀಗ ನಾನು ಬಹಳಷ್ಟು ನೊಂದಿದ್ದೇನೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ.

ನಿನ್ನೆ ಸಾಯಂಕಾಲ ನನ್ನನ್ನು ಠಾಣೆಗೆ ಕರೆಸಿದರು. ನಾನು ಮಾವನ ಮನೆಯಿಂದ ನೇರವಾಗಿ ಪೊಲೀಸ್​ ಠಾಣೆಗೆ ಹೋದೆ. ಆದರೆ, ನನ್ನನ್ನು ವಿಚಾರಣೆ ಮಾಡದೇ ಲಾಕಪ್​ನಲ್ಲಿ ಕೆಲ ಕಾಲ ಕೂರಿಸಿ ಹಿಂಸೆ ನೀಡಿದರು. ಸ್ವಲ್ಪ ಸಮಯದ ಬಳಿಕ ನನ್ನನ್ನು ಬಿಡುಗಡೆ ಮಾಡಿದರು. ಆದರೆ, ಯಾವುದೇ ವಿಚಾರಣೆ ಮಾತ್ರ ಮಾಡಲಿಲ್ಲ. ಇದರಿಂದ ನಾನು ಬಹಳ ನೊಂದಿದ್ದೇನೆ. ನನ್ನನ್ನು ಏಕಾಏಕಿ ಲಾಕಪ್​ನಲ್ಲಿ ಹಾಕಿದ್ದಾರೆ. ಇದು ತುಂಬಾ ನೋವಾಗಿದೆ.

ಗೀತಾಂಜಲಿ ಅವರು ನನಗೆ 3 ತಿಂಗಳಿಂದ ತುಂಬಾ ಚಿತ್ರಹಿಂಸೆ ನೀಡುತ್ತಿದ್ದಾರೆ. ಯಾವ ದಾರಿಯಲ್ಲೂ ಕಂಡರೂ ಒದ್ದು ಒಳಗೆ ಹಾಕುತ್ತೇನೆ ಎಂದು ಬೆದರಿಸಿದ್ದಾರೆ. ಇದನ್ನು ನಾನು ಯಾರಿಗೂ ಹೇಳಲಾಗದೇ ಮನಸ್ಸಿನಲ್ಲೇ ಕೊರಗುತ್ತಿದ್ದೇನೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಎರಡು ಪುಟಗಳ ಸುದೀರ್ಘ ಡೆತ್​ ನೋಟ್​ ಬರೆದಿರುವ ತಾಯಣ್ಣ ಕೊನೆಯಲ್ಲಿ ನನ್ನ ಎಲ್ಲ ಕುಟುಂಬ ಸದಸ್ಯರನ್ನು ನಾನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಇದೇ ನನ್ನ ಕೊನೆಯ ಬರಹ ನೋಡಿಕೊಳ್ಳಿ. ಮಿಸ್​ ಯು ಅಮ್ಮ ಎಂದು ಬರೆದಿದ್ದಾನೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net