

ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರ ಬಣ್ಣನೆ | ತಿರುಪತಿಯಲ್ಲಿ 33 ಕೋಟಿ ರೂ. ವೆಚ್ಚದ ಕಲ್ಯಾಣ ಮಂಟಪ, ವಸತಿಗೃಹಗಳ ನಿರ್ಮಾಣ
ರಾಯಚೂರು: ತಿರುಮಲ ತಿರುಪತಿ ದೇವಸ್ಥಾನ ಮತ್ತು ಶ್ರೀ ರಾಘವೇಂದ್ರ ಸ್ವಾಮಿ ಮಠದ ನಡುವೆ ಅವಿನಾಭಾವ ಸಂಬಂಧ ಅನಾದಿ ಕಾಲದಿಂದಲೂ ಮುಂದುವರಿದುಕೊಂಡು ಬಂದಿದೆ ಎಂದು ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಹೇಳಿದರು. ಟಿಟಿಡಿಯಿಂದ ತರಲಾದ ಶೇಷವಸ್ತ್ರವನ್ನು ರಾಯರಿಗೆ ಸಮರ್ಪಿದ ನಂತರ ಆಶೀರ್ವಚನ ನೀಡಿದರು. ತಿರುಪತಿ ತಿಮ್ಮಪ್ಪ, ರಾಯರು ಒಂದು ನಾಣ್ಯದ ಎರಡು ಮುಖಗಳಾಗಿದ್ದು, ಭಗವಂತ ಸರ್ವಸಮರ್ಥನಾದರೂ ಗುರುಗಳ ಮೂಲಕ ಅನುಗ್ರಹ ನೀಡುತ್ತಾನೆ. ಅದರಂತೆ ತಿಮ್ಮಪ್ಪ ತಮ್ಮ ಪರಮಭಕ್ತ ರಾಯರ ಮೂಲಕ ಭಕ್ತರಿಗೆ ನಮಗೆಲ್ಲ ನೀಡುತ್ತಾನೆ ಎಂದರು.
ಭಕ್ತರ ಅನುಕೂಲಕ್ಕಾಗಿ ತಿರುಪತಿಯಲ್ಲಿ ಶಾಖಾ ಮಠ, ವಸತಿಗೃಹವನ್ನು ನಿರ್ಮಾಣ ಮಾಡಲಾಗಿದೆ. ಈಗ 33 ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣ ಮಂಟಪ ಹಾಗೂ ಹೊಸ ವಸತಿಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ಭಕ್ತರ ಕಾಣಿಕೆಯಿಂದ 25 ಕೋಟಿ ರೂ. ವೆಚ್ಚದಲ್ಲಿ ಬಂಗಾರದ ಪೂಜಾ ಸಾಮಗ್ರಿಗಳನ್ನು ಹಾಗೂ ಬೃಂದಾವನಕ್ಕೆ ನವರತ್ನ ಕವಚ ನಿರ್ಮಾಣ ಮಾಡಲಾಗಿದೆ. ಶ್ರೀಮಠದ ಆರ್ಥಿಕ ವ್ಯವಹಾರ ಪಾರದರ್ಶಕವಾಗಿದ್ದು, ಭಕ್ತರ ಕಾಣಿಕೆ ಸಮರ್ಪಕವಾಗಿ ಬಳಕೆ ಆಗುತ್ತಿದೆ ಎಂದರು.
ಟಿಟಿಡಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾರೆಡ್ಡಿ ಮಾತನಾಡಿ, ತಿಮ್ಮಪ್ಪನ ಪರಮಭಕ್ತರಾದ ರಾಯರಿಗೆ ಶೇಷವಸ್ತ್ರ ಸಮರ್ಪಣೆ ಮೂಲಕ ತಿಮ್ಮಪ್ಪ ಮತ್ತು ರಾಯರ ಅನುಬಂಧವನ್ನು ಮುಂದುವರಿಸಲಾಗಿದೆ ಎಂದರು.