ಮಂತ್ರಾಲಯದಲ್ಲಿ ಮನೆ, ಕಲ್ಯಾಣ ಮಂಟಪಕ್ಕೆ ನುಗ್ಗಿದ ಹಳ್ಳದ ನೀರು, ಮಧ್ಯಾಹ್ನದ ನಂತರ ಸಹಜ ಸ್ಥಿತಿಯತ್ತ

ಭಾರಿ ಮಳೆ: ಮಂತ್ರಾಲಯಕ್ಕೆ ನುಗ್ಗಿದ ಮಳೆ ನೀರು - youtube
Published on

ರಾಯಚೂರು: ಕರ್ನೂಲ್ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಂತ್ರಾಲಯ-ಎಮ್ಮಿಗನೂರು ನಡುವಿನ ರಾಂಪುರ ಹಳ್ಳ ಒಡೆದು ಮಂತ್ರಾಲಯಕ್ಕೆ ಭಾನುವಾರ ಬೆಳಗಿನ ಜಾವ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಳ್ಳುವಂತಾಗಿತ್ತು. ಗ್ರಾಮದಲ್ಲಿನ ಮನೆಗಳಿಗೆ ನೀರು ನುಗ್ಗಿ ಜನರು ರಾತ್ರಿಯಿಡಿ ಜಾಗರಣೆ ನಡೆಸುವಂತಾಗಿತ್ತು.

2009ರ ತುಂಗಭದ್ರಾ ಪ್ರವಾಹದಲ್ಲಿ ಮಂತ್ರಾಲಯ ಸಂಪೂರ್ಣ ನಲುಗಿ ಹೋಗಿದ್ದನ್ನು ಜನರು ನೆನಪು ಮಾಡಿಕೊಳ್ಳುವಂತಾಗಿತ್ತು. ಆದರೆ ಶ್ರೀ ರಾಘವೇಂದ್ರಸ್ವಾಮಿ ಮಠ ಹತ್ತಿರ ಹೆಚ್ಚಿನ ನೀರು ಹರಿಯದ ಕಾರಣ ಶ್ರೀಮಠಕ್ಕೆ ಯಾವುದೇ ಸಮಸ್ಯೆ ಎದುರಾಗಿಲ್ಲ.

ರಾಂಪುರ ಕೆರೆಯ ಒಡ್ಡು ಎಮ್ಮಿಗನೂರು ರಸ್ತೆ ಹತ್ತಿರ ಒಡೆದು ಗ್ರಾಮಕ್ಕೆ ನೀರು ನುಗ್ಗಿ ಮನೆಗಳು, ಅಂಗಡಿಗಳಿಗೆ ನುಗ್ಗಿದೆ. ಮನೆ ಮತ್ತು ಅಂಗಡಿಯಲ್ಲಿದ್ದ ಸಾಮಗ್ರಿಗಳು ಹಾಳಾಗಿವೆ. ರಸ್ತೆಯಲ್ಲಿ ಎರಡು ಅಡಿಯಷ್ಟು ನೀರು ಹರಿದಿದ್ದು, ಶ್ರೀಮಠಕ್ಕೆ ಸೇರಿದ ಗೋಶಾಲೆಗೂ ನೀರು ನುಗ್ಗಿದೆ.

ಬಸ್ ನಿಲ್ದಾಣ, ಕರ್ನಾಟಕ ಭವನಕ್ಕೆ ನೀರು ನುಗ್ಗಿದ್ದು, ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿ ನಡೆಯಬೇಕಾಗಿದ್ದ ಮದುವೆಗೆ ಅಡ್ಡಿಯುಂಟಾಗಿತ್ತು. ಶ್ರೀಮಠದ ಸಿಬ್ಬಂದಿಗಳ ವಸತಿ ನಿಲಯಗಳು ದಿಗ್ಬಂಧನಕ್ಕೆ ಒಳಗಾಗಿದ್ದವು. ಕರ್ನಾಟಕ ಭವನ ಮತ್ತು ರಸ್ತೆಯಲ್ಲಿನ ನಿಲ್ಲಿಸಿದ್ದ ಕಾರ್ ಮತ್ತು ದ್ವಿಚಕ್ರ ವಾಹನಗಳು ನೀರಿನಲ್ಲಿ ಮುಳುಗಿದ್ದವು.

ಮಂತ್ರಾಲಯದ ಹತ್ತಿರದ ಹಳ್ಳ ತುಂಬಿ ಸೇತುವೆ ಮೇಲೆ ನೀರು ಹರಿದಿದ್ದರಿಂದ ರಾಯಚೂರು-ಮಂತ್ರಾಲಯ ಸಂಚಾರ ಸ್ಥಗಿತಗೊಳ್ಳುವಂತಾಗಿದೆ. ಅಧಿಕಾರಿಗಳು ಹಳ್ಳದ ನೀರು ನದಿಗೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಿದ ಮೇಲೆ ಮಧ್ಯಾಹ್ನದ ನಂತರ ಮಂತ್ರಾಲಯ ಸಹಜ ಸ್ಥಿತಿಗೆ ಮರಳಿದೆ.

ಹಳ್ಳದ ನೀರು ನುಗ್ಗಿದ್ದರಿಂದ ಮಂತ್ರಾಲಯ ಗ್ರಾಮ ಮತ್ತು ಸಿಬ್ಬಂದಿಗಳ ವಸತಿ ನಿಲಯಗಳಿಗೆ ಸಮಸ್ಯೆಯಾಗಿತ್ತು. ನೀರು ಹರಿದುಹೋಗುವಂತೆ ಮಾಡಲಾಗಿದೆ. ಶ್ರೀಮಠದ ಹತ್ತಿರ ಯಾವುದೇ ಸಮಸ್ಯೆಯಾಗಿಲ್ಲ. ಭಕ್ತರು ಆಗಮಿಸಬಹುದಾಗಿದೆ.| ವೆಂಕಟೇಶ ಜೋಷಿ, ವ್ಯವಸ್ಥಾಪಕ, ಶ್ರೀ ರಾಘವೇಂದ್ರಸ್ವಾಮಿ ಮಠ, ಮಂತ್ರಾಲಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net