

ರಾಯಚೂರು: ನೆಲ, ಜಲ, ಆಕಾಶ, ಭೂಮಿ ಮೊದಲಾದವುಗಳಲ್ಲಿ ಭಗವಂತನನ್ನು ಕಾಣುವ ಶ್ರೇಷ್ಠತೆ ಹಿಂದು ಸನಾತನ ಸಂಸ್ಕೃತಿಯಲ್ಲಿದೆ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.
ಮಂತ್ರಾಲಯದ ತುಂಗಭದ್ರಾ ನದಿ ತೀರದಲ್ಲಿ ಶ್ರೀಮಠದಿಂದ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ತುಂಗಾರತಿ ಕಾರ್ಯಕ್ರಮದ ನಿಮಿತ್ತ ನದಿಗೆ ವಿಶೇಷ ಪೂಜೆ ನೆರವೇರಿಸಿ, ಅನುಗ್ರಹ ಸಂದೇಶ ನೀಡಿದರು.
ಪಂಚಭೂತಗಳು ಮನುಷ್ಯನ ಜೀವನಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಜೀವನದ ಆಧಾರವಾಗಿವೆ. ಈ ಹಿನ್ನೆಲೆಯಲ್ಲಿ ಜೀವನಕ್ಕೆ ಮುಖ್ಯವಾಗಿರುವ ನದಿಗಳು, ತೀರ್ಥ ಕ್ಷೇತ್ರಗಳನ್ನು ಆರಾಧಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ನೀರು, ಗಾಳಿ ಪ್ರಾಣಾಧಾರವಾಗಿದೆ. ಭೂಮಿ ನೆಲೆಗೆ ಆಧಾರವಾಗಿದೆ. ಆಕಾಶವೆನ್ನುವುದು ಅವಕಾಶಕ್ಕೆ ಕಾರಣವಾಗಿದೆ. ಅಗ್ನಿ ಪಾವಿತ್ರೃತೆ ಹಾಗೂ ಆಹಾರ ಬೇಯಿಸಲು ಮತ್ತು ಹೋಮ ಯಜ್ಞಾಧಿಗಳನ್ನು ಮಾಡಲು ಸಹಕಾರಿಯಾಗಿದೆ ಎಂದರು.
ಹಲವು ನದಿಗಳು ಭಗವಂತನ ಅಂಗಾಂಗಗಳಿಂದ ಉತ್ಪತ್ತಿಯಾಗಿವೆ. ಅದರಂತೆ ವರಾಹರೂಪಿಯಾದ ಪರಮಾತ್ಮನ ಎರಡು ಕೋರೆ ಹಲ್ಲುಗಳಲ್ಲಿ ಉದ್ಭವಿಸಿದ ಅವಳಿ ನದಿಗಳು ತುಂಗಾ ಮತ್ತು ಭದ್ರೆ, ಇಂತಹ ಪುಣ್ಯನದಿಗಳು ಸೇರಿರುವ ಕ್ಷೇತ್ರವೇ ತುಂಗಭದ್ರಾ ತೀರವಾಗಿದೆ ಎಂದರು.
ಕಾರ್ತಿಕ ಮಾಸಕ್ಕಿಂತ ಪವಿತ್ರವಾದ ಮಾಸ ಮತ್ತೊಂದಿಲ್ಲ ಎಂಬಂತೆ ಹಿಂದು ಸಂಸ್ಕೃತಿಗೆ ಸಮಾನವಾದ ಸಂಸ್ಕೃತಿ ಮತ್ತೊಂದಿಲ್ಲ ಆದ್ದರಿಂದ ಪ್ರತಿಯೊಬ್ಬರು ಸನಾತನ ಹಿಂದು ಸಂಸ್ಕೃತಿಯನ್ನು ಕಾಪಾಡಬೇಕು ಎಂದು ಹೇಳಿದರು.
ಇದಕ್ಕೂ ಮೊದಲು ಪ್ರಹ್ಲಾದರಾಜರ ಉತ್ಸವ ಮೂರ್ತಿಯನ್ನು, ಶ್ರೀಮಠದಿಂದ ತುಂಗಭದ್ರಾ ನದಿಗೆ ಮೆರವಣಿಗೆ ಮಾಡಲಾಯಿತು. ನಂತರ ಶ್ರೀಗಳು ನದಿಗೆ ವಿಶೇಷ ಪೂಜೆ, ಆರತಿ ನೆರವೇರಿಸಿದರು.