ಡಿಸೆಂಬರ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಸಾಧ್ಯತೆ: ರಮೇಶ ಜಾರಕಿಹೊಳಿ

IMG_20241111_225231
Published on

ರಾಯಚೂರು: ಯತ್ನಾಳ, ಪ್ರತಾಪ್ ಸಿಂಹ ಸೇರಿದಂತೆ ಅನೇಕ ನಾಯಕರು ರಾಜ್ಯದಲ್ಲಿ ಪ್ರವಾಸ ಮಾಡುತ್ತಿರುವುದು ಪಕ್ಷವನ್ನು ಬಲಪಡಿಸಲೆಂದೇ ಹೊರತು ಯಾರ ವಿರುದ್ಧವೂ ಅಲ್ಲ ಎಂದು ಶಾಸಕ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ರಾಯಚೂರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಒಬ್ಬರ ನಾಯಕತ್ವದಿಂದ ಇಂದು ಈ ಸ್ಥಿತಿಗೆ ಬಂದಿದ್ದೇವೆ. ಸಾಮೂಹಿಕ ನಾಯಕತ್ವದ ಮೇಲೆ ವಿಶ್ವಾಸವಿದೆ. ವಿಜಯೇಂದ್ರ ಕಾರ್ಯವೈಕರಿ ತೃಪ್ತಿದಾಯಕವಾಗಿಲ್ಲ. ಎಂದಿಗೂ ವಿಜಯೇಂದ್ರನನ್ನು ರಾಜ್ಯಾಧ್ಯಕ್ಷನೆಂದು ಒಪ್ಪಿಕೊಳ್ಳುವಂತಿಲ್ಲ ಡಿಸೆಂಬರ್ ತಿಂಗಳಿನಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಮಾಡುವ ನಿರ್ಣಯವನ್ನು ಹೈಕಮಾಂಡ್ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದರು.

ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಿದ್ದಾರೆ ಅವರಿಗೆ ಅನ್ಯಾಯವಾಗಬಾರದು. ನಮಗೆ ಸಿಎಂ ಸ್ಥಾನವಾಗಲಿ, ಇತರೆ ದೊಡ್ಡ ಸ್ಥಾನಮಾನಗಳು ಬೇಕಾಗಿಲ್ಲ. ಪಕ್ಷ ಸಂಘಟನೆ ಅತ್ಯಂತ ಮುಖ್ಯವಾದದ್ದು, ಪಕ್ಷದಿಂದ ಅಸಮದಾನಗೊಂಡ ಕಾರ್ಯಕರ್ತರನ್ನು ಮತ್ತೆ ಪಕ್ಷಕ್ಕೆ ಕರೆಸಿಕೊಂಡು ಪಕ್ಷವನ್ನು ಬಲಪಡಸುವುದಷ್ಟೆ ನಮ್ಮ ಗುರಿಯಾಗಿದೆ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ವಕ್ಫ್ ನೋಟಿಸ್ ವಾಪಸ್ ಪಡೆಯುವುದಾಗಿ ಜನರ ಕಣ್ಣೊರೆಸುವ ಕೆಲಸ ಮಾಡುತ್ತಿದೆ. ಎರಡು ಮೂರು ತಿಂಗಳಿನಲ್ಲಿ ಕೇಂದ್ರ ಸರ್ಕಾರದಿಂದ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸಿದ್ದರಾಮಯ್ಯ ಬಾಯಿ ಬಿಡದ ಪರಿಸ್ಥಿತಿ ನಿರ್ಮಾಣವಾಗಿದೆ ಹುಲಿಯಂತಿದ್ದ ಇದೀಗ ಇಲಿಯಂತಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net