ನಟಿ ಸಂಜನಾಗೆ 45 ಲಕ್ಷ ವಂಚಿಸಿದ್ದ ರಾಹುಲ್ ತೋನ್ಸೆಗೆ ಜೈಲು

rahul
Published on

ಬೆಂಗಳೂರು: ನಟಿ ಸಂಜನಾ ಗಲ್ರಾನಿಗೆ 45 ಲಕ್ಷ ರೂ. ವಂಚನೆ ಮಾಡಿದ್ದ ಪ್ರಕರಣದಲ್ಲಿ ಬಹುಕೋಟಿ ವಂಚಕನಿಗೆ 61.50 ಲಕ್ಷ ರೂ. ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆ ವಿಧಿಸಿ 33ನೇ ಎಸಿಜೆಎಂ ನ್ಯಾಯಾಲಯ ತೀರ್ಪು ನೀಡಿದೆ.

ಬನಶಂಕರಿ 3ನೇ ಹಂತದ ರಾಹುಲ್ ತೋನ್ಸೆ ಅಲಿಯಾಸ್ ರಾಹುಲ್ ಶೆಟ್ಟಿ ಶಿಕ್ಷೆಗೆ ಒಳಗಾದ ಅಪರಾಧಿ. 2018-2019ನೇ ಸಾಲಿನಲ್ಲಿ ನಟಿ ಸಂಜನಾ ಗಲ್ರಾನಿಯಿಂದ 45 ಲಕ್ಷ ರೂ. ಪಡೆದು ವಂಚಿಸಿದ್ದ. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಪಿ.ಎಸ್. ಸಂತೋಷ್ ಕುಮಾರ್, ರಾಹುಲ್ ತೋನ್ಸೆ ಅಪರಾಧಿ ಎಂದು ೋಷಣೆ ಮಾಡಿ ತೀರ್ಪು ನೀಡಿದ್ದಾರೆ.

ಅಲ್ಲದೆ, ರಾಹುಲ್‌ಗೆ 61.50 ಲಕ್ಷ ರೂ. ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ 10 ಸಾವಿರ ರೂ. ಅನ್ನು ಕೋರ್ಟ್ ಶುಲ್ಕವನ್ನು ಕಡಿತ ಮಾಡಿ ಉಳಿದ 61.40 ಲಕ್ಷ ರೂ. ಅನ್ನು ದೂರುದಾರ ಸಂಜನಾ ಗಲ್ರಾನಿಗೆ ನೀಡಬೇಕು. ನಿಗದಿತ ಸಮಯದಲ್ಲಿ ದಂಡದ ಮೊತ್ತವನ್ನು ಪಾವತಿ ಮಾಡಿದರೆ 6 ತಿಂಗಳ ಶಿಕ್ಷೆಯನ್ನು ಮಾಫಿ ಮಾಡಲಾಗುತ್ತದೆ. ಇಲ್ಲವಾದರೆ, 6 ತಿಂಗಳು ಜೈಲು ಮತ್ತು ದಂಡವನ್ನು ಪಾವತಿ ಮಾಡಬೇಕೆಂದು ನ್ಯಾಯಾಲಯ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಆತ್ಮೀಯ ಸ್ನೇಹಿತನಾಗಿದ್ದ ರಾಹುಲ್ ತೋನ್ಸೆ, ಗೋವಾ ಮತ್ತು ಕೊಲಂಬೋದಲ್ಲಿ ಕ್ಯಾಸಿನೋಗಳ ವ್ಯವಸ್ಥಾಪಕ ನಿರ್ದೇಶಕ ಆಗಿದ್ದೆನೆ. ನಾನು ಹೇಳಿದ ಕಡೆಗಳಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಸಿಗಲಿದೆ ಎಂದು ಆಮಿಷವೊಡ್ಡಿದ್ದ.

ರಾಹುಲ್ ಮಾತು ನಂಬಿ 45 ಲಕ್ಷ ರೂ. ಅನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದ್ದೆ. ಆದರೆ, ಯಾವುದೇ ಆಸ್ತಿಯನ್ನು ನೋಂದಣಿ ಮಾಡಿಸಿಕೊಡಲಿಲ್ಲ. ಅಷ್ಟೊತ್ತಿಗೆ ಕೋವಿಡ್-19 ಲಾಕ್‌ಡೌನ್ ಬಂದು ಇದಾದ ಮೇಲೆ ಒತ್ತಾಯ ಮಾಡಿದಾಗ 30 ಲಕ್ಷ ರೂ. ಮತ್ತು 15 ಲಕ್ಷ ರೂ. ಮೌಲ್ಯದ ಚೆಕ್‌ಗಳನ್ನು ನೀಡಿದ್ದ.

30 ಲಕ್ಷ ರೂ. ಚೆಕ್ ಬ್ಯಾಂಕ್‌ಗೆ ಜಮೆ ಮಾಡಿದಾಗ ರಾಹುಲ್ ಚೆಕ್ ತಡೆ ಹಿಡಿಯುವಂತೆ ಲೆಟರ್ ಕೊಟ್ಟಿದ್ದ. ಉಳಿದ 15 ಲಕ್ಷ ರೂ. ಮೌಲ್ಯದ ಚೆಕ್ ಜಮೆ ಮಾಡಿದಾಗ ಬೌನ್ಸ್ ಆಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಪ್ರಾಣ ಬೆದರಿಕೆ ಒಡ್ಡಿದ್ದ ಎಂದು ಸಂಜನಾ ಗಲ್ರಾನಿ ದೂರಿನಲ್ಲಿ ಆರೋಪಿಸಿದ್ದಾರೆ.

ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಿ ಅದರ ಆದೇಶದ ಮೇಲೆ ಇಂದಿರಾನಗರ ಠಾಣೆಯಲ್ಲಿ ರಾಹುಲ್ ತೋನ್ಸೆ, ಆತನ ತಂದೆ ರಾಮಕೃಷ್ಣ ಮತ್ತು ತಾಯಿ ರಾಜೇಶ್ವರಿ ವಿರುದ್ಧ ವಂಚನೆ (ಐಪಿಸಿ 420) ಅಪರಾಧ ಒಳ ಸಂಚು (120ಬಿ), ಜೀವ ಬೆದರಿಕೆ (506), ಅವಾಚ್ಯ ಶಬ್ಧಗಳಿಂದ ನಿಂದನೆ (406) ಇತರೆ ಆರೋಪದಡಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು, ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಇದೀಗ ರಾಹುಲ್ ಅಪರಾಧಿ ಎಂದು ೋಷಣೆ ಮಾಡಿದೆ.

ಬಹುಕೋಟಿ ವಂಚಕ :

ದುಬೈ ಮತ್ತು ಶ್ರೀಲಂಕಾದಲ್ಲಿ ಕ್ಯಾಸಿನೋ, ಅತಿಥಿ ಸತ್ಕಾರ ಮತ್ತು ಬಿಟ್‌ಕಾಯಿನ್‌ನಲ್ಲಿ ಹೂಡಿಕೆ ನೆಪದಲ್ಲಿ ಉದ್ಯಮಿ ವಿವೇಕ್ ಪಿ. ಹೆಗಡೆ ಎಂಬುವರಿಂದ ರಾಹುಲ್ ಮತ್ತು ಕುಟುಂಬಸ್ಥರು 25.50 ಕೋಟಿ ರೂ. ವಂಚಿಸಿದ್ದಾರೆ.

ಈ ಸಂಬಂಧ ಬಸವೇಶ್ವರನಗರ ಠಾಣೆ ಪೊಲೀಸರು, ಸಂತ್ರಸ್ತ ವಿವೇಕ್ ನೀಡಿದ ದೂರಿನ ಮೇರೆಗೆ ರಾಹುಲ್ ತೋನ್ಸೆ, ಆತನ ತಂದೆ ರಾಮಕೃಷ್ಣ ರಾವ್, ತಾಯಿ ರಾಜೇಶ್ವರಿ ರಾವ್, ಸಹೋದರಿ ರಕ್ಷಾ ತೋನ್ಸೆ, ಭಾವ ಚೇತನ್ ನಾರಾಯಣ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ದುಬೈನಲ್ಲಿ ಅಡಗಿರುವ ರಾಹುಲ್,ರಕ್ಷಾ ಮತ್ತು ಚೇತನ್‌ಗೆ ಲುಕ್‌ಔಟ್ ನೋಟಿಸ್ ಜಾರಿ ಮಾಡಿರುವ ಪೊಲೀಸರು, ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲು ಮುಂದಾಗಿದ್ದಾರೆ. ಇತ್ತೀಚೆಗೆ ರಾಹುಲ್ ತೋನ್ಸೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್ ಸಹ ವಜಾ ಮಾಡಿದ್ದಾರೆ.

ಸೆಲೆಬ್ರಿಟಿ ಡ್ರಗ್ಸ್ ಕೇಸಿನಲ್ಲೂ ಆರೋಪಿ :

ಸೆಲೆಬ್ರಿಟಿ ಡ್ರಗ್ಸ್ ಸೇವನೆ ಮತ್ತು ಪೂರೈಕೆ ಪ್ರಕರಣದಲ್ಲಿಯೂ ರಾಹುಲ್ ತೋನ್ಸೆ ಕಿಂಗ್‌ಪಿನ್ ಆಗಿದ್ದ. ಆದರೆ, ಇತ್ತೀಚೆಗೆ ಹೈಕೋರ್ಟ್‌ನಲ್ಲಿ ಕೇಸ್ ವಜಾವಾಗಿದ್ದು, ಇದನ್ನು ಪ್ರಶ್ನಿಸಿ ಸಿಸಿಬಿ ಪೊಲೀಸರು ಮೇಲ್ಮನವಿಗೆ ಹೋಗಲು ಕಾನೂನು ತಜ್ಞರ ಮೊರೆ ಹೋಗಿದ್ದಾರೆ.

ಇದೇ ರೀತಿಯಾಗಿ ರಾಹುಲ್ ತೋನ್ಸೆ ಮತ್ತು ಅವರ ತಂದೆ ರಾಮಕೃಷ್ಣ ರಾವ್ ಹಲವರಿಗೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ದುಬೈ ಮತ್ತು ಶ್ರೀಲಂಕಾದಲ್ಲಿ ಕ್ಯಾಸಿನೋ, ಅತಿಥಿ ಸತ್ಕಾರ ಸೇವೆ ಮತ್ತು ಬಿಟ್ ಕಾಯಿನ್‌ನಲ್ಲಿ ಹೂಡಿಕೆ ಮಾಡಿದರೆ ನಿಮಗೆ ದುಪಟ್ಟು ಲಾಭಾಂಶ ಕೊಡುವುದಾಗಿ ಆಮಿಷವೊಡ್ಡಿ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ.ಕೋಟ್ಯಂತರ ರೂ.ವಂಚಿಸಿ ದುಬೈನಲ್ಲಿ ಗೋಲ್ಡನ್ ವೀಸಾ ಪಡೆದು ಅಶ್ರಯ ಪಡೆದಿದ್ದು, ಆತನ ಕರೆತರಲು ಪೊಲೀಸರು ಕೇಂದ್ರ ತನಿಖಾ ಸಂಸ್ಥೆಗಳ ಮೊರೆ ಹೋಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net