ಕೆಂಪು ಕೋಟೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಹುಲ್​ಗೆ ಅವಮಾನ! ಕಾಂಗ್ರೆಸ್​ ಅಸಮಾಧಾನ..

rahul 1
Published on

ನವದೆಹಲಿ: ದೆಹಲಿಯ ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ್ದು ತಿಳಿದ ಸಂಗತಿಯೇ. ಕುತೂಹಲದ ಸಂಗತಿಯೆಂದರೆ, ದಶಕದ ನಂತರ ಇದೇ ಮೊದಲ ಬಾರಿಗೆ ಕೆಂಪು ಕೋಟೆ ಕಾರ್ಯಕ್ರಮಕ್ಕೆ ವಿರೋಧ ಪಕ್ಷದ ನಾಯಕರೊಬ್ಬರು ಆಗಮಿಸಿದ್ದರು. ಆದರೆ ಈ ಸಂಭ್ರಮಾಚರಣೆಯಲ್ಲಿ ರಾಹುಲ್ ಗೆ ಅವಮಾನವಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.

ರಾಹುಲ್ ಸಮಾರಂಭಕ್ಕೆ ಬಂದು ಒಲಿಂಪಿಕ್ ಪದಕ ವಿಜೇತರೊಂದಿಗೆ ಕೊನೆಯ ಸಾಲಿನಲ್ಲಿ ಕುಳಿತರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಬಿಳಿ ಕುರ್ತಾ-ಪೈಜಾಮ ಧರಿಸಿ ರಾಹುಲ್ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಭಾರತೀಯ ಹಾಕಿ ತಂಡದ ಫಾರ್ವರ್ಡ್ ಆಟಗಾರ ಗುರ್ಜಂತ್ ಸಿಂಗ್ ಅವರ ಪಕ್ಕದಲ್ಲಿ ಅವರು ಕುಳಿತಿದ್ದಾರೆ. ಮುಂದಿನ ಸಾಲಿನಲ್ಲಿ ಮನು ಭಾಕರ್ ಮತ್ತು ಸರಬ್ ಜೋತ್ ಸಿಂಗ್ ಅವರಂತಹ ಒಲಿಂಪಿಕ್ ಪದಕ ವಿಜೇತರು ಇದ್ದಾರೆ.

ಒಲಂಪಿಕ್-ಕಂಚಿನ ವಿಜೇತ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪಿಆರ್ ಶ್ರೀಜೇಶ್ ಸೇರಿದಂತೆ ತಂಡದ ಸದಸ್ಯರು ಕೂಡ ರಾಹುಲ್ ಗಾಂಧಿಗಿಂತ ಮೊದಲ ಸಾಲಿನಲ್ಲಿ ಕುಳಿತಿದ್ದರು. ಪ್ರೋಟೋಕಾಲ್ ಪ್ರಕಾರ, ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ಮತ್ತು ಕ್ಯಾಬಿನೆಟ್ ಸಚಿವರಿಗೆ ಯಾವಾಗಲೂ ಮುಂದಿನ ಸಾಲಿನಲ್ಲಿ ಆಸನವನ್ನು ಮೀಸಲಿಡಲಾಗುತ್ತದೆ. ಮುಂದಿನ ಸಾಲಿನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಶಿವರಾಜ್ ಸಿಂಗ್ ಚೌಹಾಣ್, ಅಮಿತ್ ಶಾ ಮತ್ತು ಎಸ್ ಜೈಶಂಕರ್ ಇದ್ದಾರೆ.

ಇದರಿಂದಾಗಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಗಾಂಧಿ ಆಸನ ವ್ಯವಸ್ಥೆ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಆದರೆ, ತಮ್ಮ ನಾಯಕನಿಗೆ ಅವಮಾನ ಮಾಡಲಾಗಿದೆ ಎಂದು ಕಾಂಗ್ರೆಸ್‌ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮುಂದಿನ ಸಾಲುಗಳು ಒಲಿಂಪಿಕ್ಸ್ ಪದಕ ವಿಜೇತರಿಗೆ ಮೀಸಲಾಗಿದ್ದರಿಂದ ಕಾಂಗ್ರೆಸ್ ಸಂಸದರನ್ನು ಹಿಂದಕ್ಕೆ ಸ್ಥಳಾಂತರಿಸಬೇಕಾಯಿತು ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ರಕ್ಷಣಾ ಸಚಿವಾಲಯವು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸುವ ಮತ್ತು ಆಸನ ಯೋಜನೆಗಳನ್ನು ಮಾಡುವ ಜವಾಬ್ದಾರಿಯನ್ನು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net