ಹೊಸ ಸಿಇಸಿ ನೇಮಕಾತಿಯ ವಿರುದ್ಧ ಕಾಂಗ್ರೆಸ್ ನಾಯಕ ವಾಗ್ದಾಳಿ; ಮಧ್ಯರಾತ್ರಿಯ ನಿರ್ಧಾರ ಅವಮಾನಕರ & ಅಸಭ್ಯ ಎಂದಿದ್ದೇಕೆ ರಾಹುಲ್ ಗಾಂಧಿ | Rahul Gandhi

Untitled design (41)
Published on: 

ನವದೆಹಲಿ: ದೇಶದ ನೂತನ ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುತ್ತಿರುವಾಗ ಮಧ್ಯರಾತ್ರಿ ಹೊಸ ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ನಿರ್ಧಾರವನ್ನು ಪ್ರಧಾನಿ ಮತ್ತು ಗೃಹ ಸಚಿವರು ತೆಗೆದುಕೊಳ್ಳುವುದು ಅಗೌರವ ಮತ್ತು ಅಸಭ್ಯವಾಗಿದೆ ಎಂದು ಅವರು ಹೇಳಿದರು.

ಮುಂದಿನ ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯ ಸಭೆಯಲ್ಲಿ ನಾನು ಪ್ರಧಾನಿ ಮತ್ತು ಗೃಹ ಸಚಿವರಿಗೆ ಭಿನ್ನಾಭಿಪ್ರಾಯ ಪತ್ರವನ್ನು ಸಲ್ಲಿಸಿದ್ದೇನೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಕಾರ್ಯಾಂಗದ ಹಸ್ತಕ್ಷೇಪದಿಂದ ಮುಕ್ತವಾದ ಸ್ವತಂತ್ರ ಚುನಾವಣಾ ಆಯೋಗದ ಅತ್ಯಂತ ಮೂಲಭೂತ ಅಂಶವೆಂದರೆ ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಎಂದು ಅವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಸಮಿತಿಯಿಂದ ತೆಗೆದುಹಾಕುವ ಮೂಲಕ, ಮೋದಿ ಸರ್ಕಾರವು ಚುನಾವಣಾ ಪ್ರಕ್ರಿಯೆಯ ಸಮಗ್ರತೆಯ ಬಗ್ಗೆ ಕೋಟ್ಯಂತರ ಮತದಾರರ ಕಳವಳವನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು. ವಿರೋಧ ಪಕ್ಷದ ನಾಯಕನಾಗಿ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ನಮ್ಮ ರಾಷ್ಟ್ರ ನಿರ್ಮಾಣಕಾರರ ಆದರ್ಶಗಳನ್ನು ಎತ್ತಿಹಿಡಿಯುವುದು ಮತ್ತು ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವುದು ನನ್ನ ಕರ್ತವ್ಯ ಎಂದು ತಿಳಿಸಿದರು.

ದೇಶದ ಹೊಸ ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ಹೆಸರನ್ನು ಘೋಷಿಸಲಾಗಿದೆ. ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹೊಸ ಮುಖ್ಯ ಚುನಾವಣಾ ಆಯುಕ್ತರಾಗಿ (ಸಿಇಸಿ) ಬಡ್ತಿ ನೀಡಲಾಗಿದೆ. ಜ್ಞಾನೇಶ್ ಕುಮಾರ್ ಜತೆಗೆ ಒಬ್ಬ ಚುನಾವಣಾ ಆಯುಕ್ತರನ್ನು ಸಹ ನೇಮಿಸಲಾಗಿದೆ. ಇದಕ್ಕಾಗಿ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು ಇದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾಗವಹಿಸಿದ್ದರು.(ಏಜೆನ್ಸೀಸ್​​)