

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಯೂತ್ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ರಾಹುಲ್ ಗಾಂಧಿ ಆಡಿರುವ ಮಾತುಗಳು ಭಾರೀ ಚರ್ಚೆಯಲ್ಲಿವೆ. ಕಳೆದ ವರ್ಷ ಕಾಂಗ್ರೆಸ್ಅನ್ನು ತ್ಯಜಿಸಿ ಬಿಜೆಪಿ ಸೇರಿ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕಾರಣವಾದ ಜ್ಯೋತಿರಾದಿತ್ಯ ಸಿಂದಿಯಾ ಅವರು ಬಿಜೆಪಿಯಲ್ಲಿ "ಬ್ಯಾಕ್ಬೆಂಚರ್" ಆಗಿದ್ದಾರೆಂದು ಗಾಂಧಿ ಹೇಳಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಸೋಮವಾರ ಕಾಂಗ್ರೆಸ್ ಯುವ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, "ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಕೆಲಸ ಮಾಡಿ ಪಕ್ಷವನ್ನು ಬಲಪಡಿಸುವ ಅವಕಾಶ ಸಿಂದಿಯಾಗೆ ಇತ್ತು. ನಾನು ಅವರಿಗೆ ಹೇಳಿದ್ದೆ - ಒಂದು ದಿನ ನೀವು ಮುಖ್ಯಮಂತ್ರಿ ಆಗ್ತೀರಾ ಅಂತ. ಆದರೆ ಅವರು ಬೇರೆ ಮಾರ್ಗ ಆಯ್ದುಕೊಂಡರು. ಬರೆದಿಟ್ಟುಕೊಳ್ಳಿ... ಅವರು ಅಲ್ಲಿ (ಬಿಜೆಪಿ) ಯಾವತ್ತೂ ಸಿಎಂ ಆಗೋದಿಲ್ಲ. ಅದಕ್ಕಾಗಿ ಅವರು ಇಲ್ಲಿಗೆ ವಾಪಸ್ ಬರಬೇಕಾಗುತ್ತದೆ” ಎಂದು ಹೇಳಿದ್ದನ್ನು ಮಾಧ್ಯಮಗಳು ವರದಿ ಮಾಡಿದ್ದವು.
ರಾಹುಲ್ ಗಾಂಧಿಯವರ ಮಾತಿಗೆ ಇದೀಗ ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿರುವ ಸಿಂದಿಯಾ ಪ್ರತ್ಯುತ್ತರ ನೀಡಿದ್ದಾರೆ. "ನಾನು ಕಾಂಗ್ರೆಸ್ನಲ್ಲಿದ್ದಾಗ, ಈವಾಗ ಕಾಳಜಿ ತೋರಿಸುತ್ತಿರುವ ರೀತಿಯಲ್ಲಿ ಕಾಳಜಿ ತೋರಿಸಿದ್ದಿದ್ದರೆ, ಸನ್ನಿವೇಶ ಬೇರೆ ರೀತಿ ಇರುತ್ತಿತ್ತು" ಎಂದು ಸಿಂದಿಯಾ ಚುಟುಕಾಗಿ ತಿರುಗೇಟು ನೀಡಿದ್ದಾರೆ.
ಒಂದು ವರ್ಷದ ಹಿಂದೆ ಸಿಂದಿಯಾ ಕಾಂಗ್ರೆಸ್ನೊಂದಿಗಿನ ತಮ್ಮ 19 ವರ್ಷಗಳ ಸಂಪರ್ಕವನ್ನು ಕಡಿದುಕೊಂಡಿದ್ದರು. ರಾಜ್ಯ ಕಾಂಗ್ರೆಸ್ನಲ್ಲಿ ತಮಗೆ ಸೂಕ್ತ ಮಹತ್ವ ನೀಡದಿರುವ ಬಗ್ಗೆ ಸಿಂದಿಯಾ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ