ರಾಜೀವ್ ಗಾಂಧಿ ಹತ್ಯೆ ವಿಚಾರ ಮತ್ತೆ ಪ್ರಸ್ತಾಪ; ರಾಹುಲ್​ ಗಾಂಧಿ ಹೇಳಿದ್ದೇನು?

Rahul Gandhi
Published on

ಪುದುಚೇರಿ: ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಹತ್ಯೆ ನಡೆದು ಮೂರು ದಶಕಗಳೇ ಕಳೆದಿದ್ದರೂ ಇದೀಗ ಆ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ತಂದೆಯ ಹತ್ಯೆಯ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, ಆ ಕುರಿತು ತಮ್ಮ ಅನಿಸಿಕೆಯನ್ನೂ ಹೇಳಿದ್ದಾರೆ.

ಅಷ್ಟಕ್ಕೂ ರಾಜೀವ್ ಗಾಂಧಿ ಹತ್ಯೆಯ ವಿಚಾರ ಪ್ರಸ್ತಾಪವಾಗಲು ಮುಖ್ಯ ಕಾರಣ ವಿದ್ಯಾರ್ಥಿನಿಯರು. ಪುದುಚೇರಿಯಲ್ಲಿನ ಭಾರತಿದಾಸನ್​ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರ ಜತೆ ಬುಧವಾರ ನಡೆದ ಸಂವಾದ ವೇಳೆ ಈ ವಿಷಯ ಪ್ರಸ್ತಾಪಗೊಂಡಿದೆ. 'ನಿಮ್ಮ ತಂದೆ ಎಲ್​ಟಿಟಿಇಯವರಿಂದ ಹತ್ಯೆಗೀಡಾಗಿದ್ದರು. ಎಲ್​ಟಿಟಿಇ ಸದಸ್ಯರ ಬಗ್ಗೆ ನಿಮ್ಮ ಅನಿಸಿಕೆ ಏನು?' ಎಂಬುದಾಗಿ ವಿದ್ಯಾರ್ಥಿನಿಯೊಬ್ಬರು ರಾಹುಲ್​ ಗಾಂಧಿ ಅವರನ್ನು ಕೇಳಿದ್ದಾರೆ. ಅದಕ್ಕೆ ರಾಹುಲ್​ ಗಾಂಧಿ ಮುಕ್ತವಾಗಿಯೇ ಉತ್ತರ ನೀಡಿದ್ದಾರೆ.

'ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದಂತೂ ನಿಜ, ಅದು ನನ್ನ ಅತಿ ಕಷ್ಟದ ದಿನಗಳಾಗಿದ್ದವು. ಆದರೆ ನನಗೆ ಯಾರ ಬಗ್ಗೆಯೂ ಸಿಟ್ಟು ಅಥವಾ ದ್ವೇಷವಿಲ್ಲ.. ನಾನು ಕ್ಷಮಿಸುತ್ತೇನೆ..' ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ. ಮಾತ್ರವಲ್ಲ, 'ಹಿಂಸೆ ನಿಮ್ಮಿಂದ ಯಾವುದನ್ನೂ ದೂರಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ. ನನ್ನ ತಂದೆ ನನ್ನೊಳಗೇ ಜೀವಂತವಿದ್ದಾರೆ, ಅವರು ನನ್ನ ಮೂಲಕವೇ ಮಾತನಾಡುತ್ತಿದ್ದಾರೆ' ಎಂದೂ ರಾಹುಲ್​ ಗಾಂಧಿ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net