

ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ದೇಶದಲ್ಲಿ ಉಂಟಾಗಿರುವ ನಿರುದ್ಯೋಗ ಸಮಸ್ಯೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷದ ವಿರುದ್ಧ ಕಿಡಿ ಕಾರಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಪೊಳ್ಳಾಗಿದ್ದು ಅದು ಈ ದೇಶದ ಶ್ರೀಮಂತ ಉದ್ಯೋಗಿಗಳ ಜೇಬು ತುಂಬಿಸಲು ಮಾತ್ರ ಸಾಧ್ಯ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಅದಾನಿಯವರಿಗೆ ನರೇಂದ್ರ ಮೋದಿಯವರು ನೀಡಿದ ಯೋಜನೆಗಳ ಪಟ್ಟಿ ಮಾಡಲು 45 ನಿಮಿಷಗಳಾದರೂ ಬೇಕು. ಕೇಂದ್ರ ಸರ್ಕಾರದ ಯೋಜನೆಗಳೆಲ್ಲ ದೇಶದ 15 ದೊಡ್ಡ ಉದ್ಯಮಿಗಳಿಗೇ ಮೀಸಲು ಎಂದು ದಕ್ಷಿಣ ದೆಹಲಿಯ ಜುಂಗ್ಪುರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದರು.
ಅದಾನಿ ಮತ್ತು ಅಂಬಾನಿ ಎಂಬ ಎರಡು ಹೆಸರುಗಳಿಂದಲೇ ಈ ಕೇಂದ್ರ ಸರ್ಕಾರ ನಡೆಯುತ್ತಿದೆ ಹೊರತು ಪ್ರಧಾನಿ ಮೋದಿಯವರಿಂದ ಅಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದರು.
ಜಪಾನ್ ಮತ್ತು ಇಟಲಿಯಂತಹ ದೇಶಗಳು ಈ ಮೊದಲು ತಮ್ಮ ಕಂಪನಿಗಳನ್ನು ಚೀನಾದಲ್ಲಿ ಸ್ಥಾಪನೆ ಮಾಡಲು ಮುಂದಾಗುತ್ತಿದ್ದರು. ಈಗ ಭಾರತದತ್ತ ನೋಡುತ್ತಿದ್ದಾರೆ. ಆದರೆ ಅವರಿಗೆ ಒಂದು ಪ್ರಶ್ನೆಯಿದೆ. ಭಾರತದ ಯುವಕರು ಚೀನಾಕ್ಕೆ ಸರಿಸಾಟಿಯಾಗಿ ನಿಲ್ಲುತ್ತಾರಾ? ಮೇಡ್ ಇನ್ ಇಂಡಿಯಾವನ್ನು ಅಷ್ಟು ಪ್ರಸಿದ್ಧಿ ಮಾಡುತ್ತಾರಾ ಎಂಬುದು ಎಂದು ಹೇಳಿದರು.
ಮೇಡ್ ಇನ್ ಇಂಡಿಯಾ ಎಂಬ ಉತ್ತಮ ಘೋಷಣೆಯನ್ನೇನೋ ಪ್ರಧಾನಿ ನೀಡಿದರು. ಆದರೆ ಅದಕ್ಕೆ ತಕ್ಕಂತೆ ಒಂದು ಕಾರ್ಖಾನೆ, ಕಂಪನಿಯನ್ನೂ ಸ್ಥಾಪಿಸಲಿಲ್ಲ. ಅದು ಬಿಡಿ, ಇಂಡಿಯನ್ ಆಯಿಲ್, ಏರ್ ಇಂಡಿಯಾ, ಹಿಂದುಸ್ತಾನ್ ಪೆಟ್ರೋಲಿಯಂನಂತಹ ಸಂಸ್ಥೆಗಳಿಂದಲೇ ಕೇಂದ್ರ ಸರ್ಕಾರ ದೂರ ಉಳಿದಿದೆ. ಹೀಗೇ ಬಿಟ್ಟರೆ ತಾಜ್ ಮಹಲ್ ಕೂಡ ಬಿಜೆಪಿ ಸರ್ಕಾರದವರು ಮಾರಾಟ ಮಾಡಿಬಿಡುತ್ತಾರೆ ಎಂದು ವ್ಯಂಗ್ಯವಾಡಿದರು.
ಮೇಡ್ ಇನ್ ಇಂಡಿಯಾ ಎಂಬ ಘೋಷಣೆಗೆ ತಕ್ಕಂತೆ ನಡೆದುಕೊಂಡರೆ ದೇಶದ ಎರಡು ಕೋಟಿ ಯುವಕರು ಉದ್ಯೋಗ ಪಡೆಯುತ್ತಾರೆ. ಆದರೆ ಕೇಂದ್ರ ಸರ್ಕಾರ ಇದರ ಬಗ್ಗೆ ಯೋಚಿಸದೆ ದೇಶದ ಜನರು ಪರಸ್ಪರ ಹೊಡೆದಾಡುವಂತಹ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.(ಏಜೆನ್ಸೀಸ್)