ರಾಹುಲ್ ಗಾಂಧಿ ನೋ ಡೇಟಾ ಓನ್ಲಿ ಗಲಾಟಾ..!

ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ.ಸಂಬಿತ್ ಪಾತ್ರಾ ಲೇವಡಿ, ಎಸ್‌ಐಆರ್ ಬಗ್ಗೆ ಜಾರಕಿಹೊಳಿ ಬಳಿ ಮಾಹಿತಿ ಪಡೆಯಲಿ
ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ. ಸಂಬಿತ್ ಪಾತ್ರಾ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ. ಸಂಬಿತ್ ಪಾತ್ರಾ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
Published on: 

ಬೆಂಗಳೂರು: ಎಸ್‌ಐಆರ್ ವೇಳೆ ಮತದಾನದ ಹಕ್ಕು ಕಸಿಯಲಾಗಿದೆ ಎಂದು ಆರೋಪಿಸುವ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ,ಮೊದಲು ಸಚಿವ ಸತೀಶ್ ಜಾರಕಿಹೊಳಿ ಜತೆಗೆ ಚರ್ಚೆ ನಡೆಸಲಿ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ. ಸಂಬಿತ್ ಪಾತ್ರಾ ಒತ್ತಾಯಿಸಿದರು.

ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆ ಚೆನ್ನಾಗಿ ಆಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಸತ್ಯವನ್ನು ಹೇಳಿದ್ದಾರೆ. ಆದರೆ, ನೋ ಡೇಟಾ ಓನ್ಲಿ ಗಲಾಟಾ (ಅಂಕಿಅಂಶಗಳಿಲ್ಲ, ಬರೀ ಗಲಾಟೆ) ಎಂಬ ಹಾಸ್ಯಕ್ಕೆಒಳಗಾಗಿರುವ ರಾಹುಲ್ ಗಾಂಧಿ, ಯಾವುದೇ ಅಂಕಿಅಂಶಗಳನ್ನು ಬಿಡುಗಡೆ ಮಾಡದೆ ಕೇವಲ ರಸ್ತೆಯಲ್ಲಿ ಗಲಾಟೆ ಮಾಡಿಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ. ಅನುಮಾನ ಇದ್ದರೇ ಸತೀಶ್ ಜಾರಕಿಹೊಳಿ ಬಳಿ ಎಸ್‌ಐಆರ್ ಬಗ್ಗೆ ಮಾಹಿತಿ ಪಡೆದು ಮಾತನಾಡಲಿ ಎಂದು ಆಗ್ರಹಿಸಿದರು.

ಆತ್ಮಗೌರವಕ್ಕೆ ನೋವಾಗಿಲ್ಲವೇ ? ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ರಾಹುಲ್ ಗಾಂಧಿ, ತಮ್ಮನ್ನು ಏಕೆ ಮೊಣಕೈಯಿಂದ ನೂಕಿದರು ? ದೂರ ಸರಿಯುವಂತೆ ಮಾಡಿದರು. ಇದರಿಂದ ಸ್ವಾಭಿಮಾನಕ್ಕೆ ಧಕ್ಕೆಯಾಗಿಲ್ಲವೇ ? ಆತ್ಮಗೌರವಕ್ಕೆ ನೋವಾಗಿಲ್ಲವೇ ? ನಿಮ್ಮಕಣ್ಣಿನಲ್ಲಿ ನೀರು ತುಂಬಿಕೊಂಡಿದ್ದನ್ನು ನಾನು ನೋಡಿದ್ದೇನೆ. ಈ ಬಗ್ಗೆ ಜನರ ಮುಂದೆ ಸ್ಪಷ್ಟಪಡಿಸಬೇಕೆಂದು ಡಾ. ಸಂಬಿತ್ ಪಾತ್ರಾ ಒತ್ತಾಯಿಸಿದರು.

ಅಷ್ಟೇ ಅಲ್ಲ, ಕರ್ನಾಟಕದಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಶಿಲ್ಪಾ ಪದವೀಧರರಲ್ಲ. ಆದರೂ ಜಿಲ್ಲಾ ಘಟಕದ ಅಧ್ಯಕ್ಷರ ಪತ್ನಿಯ ಪರವಾಗಿ ಮತವನ್ನು ಚಲಾಯಿಸಿದ್ದಾರೆ. ಮತಗಳ್ಳತನ ಆರೋಪ ಮಾಡಿ ಮತಪತ್ರದಲ್ಲಿ ಚುನಾವಣೆ ನಡೆಸಿದರೂ ನಿಮ್ಮ ಕಾಂಗ್ರೆಸ್ಸಿಗರು ಮತಗಳ್ಳತನ ಮಾಡುತ್ತಿರುವ ಬಗ್ಗೆ ಶಿಲ್ಪಾ ಅವರೊಂದಿಗೆ ರಾಹುಲ್ ಗಾಂಧಿ ಮಾಹಿತಿ ಪಡೆಯಲಿ ಎಂದು ಸಂಬಿತ್ ಪಾತ್ರಾ ಲೇವಡಿ ಮಾಡಿದರು.

ಸಂಸತ್‌ನಲ್ಲಿ ನಾನು ಮಾತನಾಡಿದರೇ ಭೂಕಂಪ ಆಗಲಿದೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಆದರೆ, ಅವರು ಸಂಸತ್ತಿನಲ್ಲಿ 5 ನಿಮಿಷಗಳಿಗಿಂತ ಹೆಚ್ಚು ಕಾಲ ತಾಳ್ಮೆಯಿಂದ ಕುಳಿತುಕೊಳ್ಳುವ ಸಹನೆಯೇ ಇಲ್ಲ. ಒಮ್ಮೆ ಕೈಕಟ್ಟಿ ಕುಳಿತುಕೊಳ್ಳುತ್ತಾರೆ, ಮತ್ತೊಮ್ಮೆ ಕಾಲು ಮೇಲೆ ಹಾಕಿಕೊಂಡು ಕುಳಿತುಕೊಳ್ಳುತ್ತಾರೆ. ಇದ್ದಕ್ಕಿದ್ದಂತೆ ಎದ್ದು ನಿಲ್ಲುತ್ತಾರೆ. ಮತ್ತೆ ಹಿಂದೆ ಹೋಗುತ್ತಾರೆ, ಪುನಃ ಬಂದು ಕುಳಿತುಕೊಳ್ಳುತ್ತಾರೆ. ಎಲ್ಲಿಗೆ ಹೋಗುತ್ತಾರೆ ? ಏನು ಮಾಡುತ್ತಾರೆ ? ಐದು ನಿಮಿಷ ಬರುತ್ತಾರೆ, ಮತ್ತೆ ಐದು ನಿಮಿಷಕ್ಕೆ ಹೊರಟುಹೋಗುತ್ತಾರೆ. ಸಂಸತ್ತಿನಲ್ಲಿ ಚರ್ಚೆ ನಡೆಸಲು ಆಸಕ್ತಿ ತೋರುವುದಿಲ್ಲ.

ಸುಪ್ರೀಂ ಕೋರ್ಟ್‌ಗೆ ಅಥವಾ ಜನರಿಗೆ ಆರೋಪಕ್ಕೆ ತಕ್ಕಂತೆ ಅಂಕಿಅಂಶಗಳನ್ನು ನೀಡುತ್ತಿಲ್ಲ ಎಂದು ಸಂಬಿತ್ ಪಾತ್ರಾ ಆರೋಪಿಸಿದರು.

ವಾದ್ರಾಕ್ಕಿಂತ ಬೋರಾ ಹೆಚ್ಚಾದರು : ದೇವಸ್ಥಾನಗಳ ಪ್ರತಿಯೊಬ್ಬ ಅರ್ಚಕರೂ ಅತ್ಯಾಚಾರಿಗಳು ಎಂದು ಹೇಳಿದ ನೀಹಾ ಬೋರಾ ಅವರೇ ರಾಹುಲ್ ಗಾಂಧಿಗೆ ಅತ್ಯಂತ ಆಪ್ತರಾಗಿದ್ದು, ಕಾಂಗ್ರೆಸ್ ಪ್ರಮುಖ ವ್ಯಕ್ತಿಯಾಗಿದ್ದಾರೆ. ಪ್ರಿಯಾಂಕಾ ವಾದ್ರಾ ಅವರನ್ನೂ ಹಿಂದಕ್ಕೆ ಸರಿಸಿ, ಬೋರಾಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ ಎಂದರು.