

Rahul Gandhi: ದೆಹಲಿಯ ಕೆಂಪುಕೋಟೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅದ್ಧೂರಿಯಾಗಿ ನಡೆದಿದ್ದು, ಪ್ರಧಾನಿ ಸೇರಿ ಕೇಂದ್ರ ಸರ್ಕಾರ ಹಲವು ಸಚಿವರು ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದು ಊಹಾಪೋಹಗಳಿಗೆ ಕಾರಣವಾಗಿದೆ.
ಕೆಂಪುಕೋಟೆಯ ಸರ್ಕಾರಿ ಸಮಾರಂಭದಲ್ಲಿ ಭಾಗವಹಿಸದ ಇಬ್ಬರು, ಕಾಂಗ್ರೆಸ್ನ ಪ್ರಧಾನ ಕಚೇರಿ ಇಂದಿರಾ ಭವನದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಧ್ವಜಾರೋಹಣ ಮಾಡಿದರು.
"ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಮೂಲಕ ಪಡೆದ ಈ ಸ್ವಾತಂತ್ರ್ಯ, ಸತ್ಯ ಮತ್ತು ಸಮಾನತೆಯ ಅಡಿಪಾಯದ ನ್ಯಾಯದ ಮೇಲೆ ನಿಂತಿದೆ. ಪ್ರತಿಯೊಬ್ಬರ ಗೌರವ ಮತ್ತು ಸಹೋದರತ್ವದಿಂದ ತುಂಬಿರುವ ಭಾರತವನ್ನು ನಿರ್ಮಿಸುವ ಸಂಕಲ್ಪವಾಗಿದೆ. ಈ ಅಮೂಲ್ಯ ಪರಂಪರೆಯ ಹೆಮ್ಮೆ ಮತ್ತು ಗೌರವವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ" ಎಂದು ಎಕ್ಸ್ನಲ್ಲಿ ರಾಹುಲ್ ಗಾಂಧಿ ಪೋಸ್ಟ್ ಮಾಡಿ ಶುಭ ಕೋರಿದ್ದಾರೆ.
"ನಮ್ಮ ಪ್ರಜಾಪ್ರಭುತ್ವವು ಪಾಲಿಸಬೇಕಾದ ಸ್ವಾತಂತ್ರ್ಯ, ನ್ಯಾಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳಿಗೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳಲು ಸ್ವಾತಂತ್ರ್ಯ ದಿನವು ಒಂದು ಪ್ರಮುಖ ಸಂದರ್ಭವಾಗಿದೆ" ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕೆಂಪುಕೋಟೆಯ ಕಾರ್ಯಕ್ರಮಕ್ಕೆ ಗೈರು ಆಗಿದ್ದೇಕೆ?
ಕೆಂಪುಕೋಟೆಯ ಕಾರ್ಯಕ್ರಮಕ್ಕೆ ಗೈರು ಆಗಿದ್ದಕ್ಕೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಖರ್ಗೆ ಅವರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಆದರೆ ಕಳೆದ ವರ್ಷದ ಕಾರ್ಯಕ್ರಮದ ಆಸನ ವ್ಯವಸ್ಥೆಯಿಂದ ಅಸಮಾಧಾನಗೊಂಡ ನಂತರ ರಾಹುಲ್ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಶಿಷ್ಟಚಾರ, ನಿಯಮ ಉಲ್ಲಂಘಿಸಿ ಕ್ಯಾಬಿನೆಟ್ ಸಚಿವರ ಸ್ಥಾನಮಾನ ಹೊಂದಿದ್ದ ರಾಹುಲ್ ಅವರಿಗೆ ಮುಂದಿನ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡದೇ, ಎರಡನೇ ಸಾಲಿನ ಕೊನೆಯಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಂದು ರಾಹುಲ್ ಒಲಿಂಪಿಕ್ ವಿಜೇತರ ಜೊತೆ ಐದನೇ ಸಾಲಿನಲ್ಲಿ ಕುಳಿತಿದ್ದರು. ಇದು ವಿವಾದಕ್ಕೆ ಕಾರಣವಾಗಿ ಕಾಂಗ್ರೆಸ್ ಮತ್ತು ವಿಪಕ್ಷಗಳು ಕೇಂದ್ರ ಸರ್ಕಾರವನ್ನು ಟೀಕಿಸಿದ್ದವು.
ಆದರೆ ಕಾರ್ಯಕ್ರಮವನ್ನು ಆಯೋಜಿಸಿದ್ದ ರಕ್ಷಣಾ ಸಚಿವಾಲಯ, ಕಾರ್ಯಕ್ರಮದಲ್ಲಿ ಒಲಿಂಪಿಕ್ ವಿಜೇತರಿಗೆ ಸ್ಥಳಾವಕಾಶ ಕಲ್ಪಿಸುವ ಸಲುವಾಗಿ ವ್ಯವಸ್ಥೆಯನ್ನ ಬದಲಾಯಿಸಲಾಗಿದೆ. ಕೇಂದ್ರ ಸಚಿವರು ಸಹ ಒಲಿಂಪಿಯನ್ಗಳ ಜೊತೆಗೆ ಕುಳಿತಿದ್ದಾರೆ ಎಂದು ಹೇಳಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್, ಒಲಿಂಪಿಯನ್‌ಗಳು ಎಲ್ಲಾ ಗೌರವಕ್ಕೂ ಅರ್ಹರಾಗಿದ್ದರೂ, ಅಮಿತ್ ಶಾ ಅಥವಾ ನಿರ್ಮಲಾ ಸೀತಾರಾಮನ್ ಅವರಂತಹ ಕ್ಯಾಬಿನೆಟ್ ಸಚಿವರು ಮೊದಲ ಸಾಲಿನಲ್ಲಿ ಆಸನಗಳನ್ನು ಹೇಗೆ ಪಡೆಯುತ್ತಾರೆ" ಎಂದು ವಾಗ್ದಾಳಿ ನಡೆಸಿತ್ತು.
ಶಿಷ್ಟಾಚಾರದ ಪ್ರಕಾರ, ಸರ್ಕಾರಿ ಕಾರ್ಯಕ್ರಮಗಳಲ್ಲಿ ವಿರೋಧ ಪಕ್ಷದ ನಾಯಕ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಾರೆ. ಕಳೆದ ವರ್ಷ, ಆ ಸಾಲಿನಲ್ಲಿ ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಶಿವರಾಜ್ ಸಿಂಗ್ ಚೌಹಾಣ್, ಅಮಿತ್ ಶಾ ಮತ್ತು ಎಸ್. ಜೈಶಂಕರ್ ಇತರರು ಕುಳಿತಿದ್ದರು. (ಏಜೆನ್ಸೀಸ್)