

Amit Malviya: ಭಾರತ-ಚೀನಾ ಸಂಘರ್ಷದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗಳಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ನಂತರ, ಬಿಜೆಪಿ ನಾಯಕ ಅಮಿತ್ ಮಾಳವಿಯಾ ಅವರು ರಾಹುಲ್ ಗಾಂಧಿಯನ್ನು ರಾಷ್ಟ್ರವಿರೋಧಿ ಎಂದು ಸೋಮವಾರ (ಆಗಸ್ಟ್ 4) ಕರೆದಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮಾಳವೀಯ, ರಾಹುಲ್ ಗಾಂಧಿ ಕ್ರಮಗಳು ಮತ್ತು ಹೇಳಿಕೆಗಳು ಭಾರತದ ಸಾರ್ವಭೌಮತ್ವ, ರಾಷ್ಟ್ರೀಯ ಭದ್ರತೆ ಮತ್ತು ಭಾರತೀಯ ಸೇನೆಯನ್ನು ನಿರಂತರವಾಗಿ ದುರ್ಬಲಗೊಳಿಸುತ್ತಿವೆ ಎಂದು ಆರೋಪಿಸಿದ್ದಾರೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಭಾರತ ಸರ್ಕಾರವನ್ನು ದುರ್ಬಲಗೊಳಿಸಲು ಕಾಂಗ್ರೆಸ್ ನಾಯಕರು ವಿದೇಶಿ ಶಕ್ತಿಗಳ ಬೆಂಬಲವನ್ನು ಬೇಡುತ್ತಿದ್ದಾರೆ ಎಂದು ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನೆಡೆಸಿದ್ದಾರೆ.
ವಿಪಕ್ಷ ನಾಯಕ ರಾಹುಲ್ ಗಾಂಧಿ, ಚೀನಾ ಕಮ್ಯುನಿಸ್ಟ್ ಪಕ್ಷದೊಂದಿಗೆ ರಹಸ್ಯ ಪತ್ರಕ್ಕೆ ಸಹಿ ಹಾಕಿದ್ದಾರೆ. ಇದರ ಎಲ್ಲ ವಿವರಗಳು ಸಾರ್ವಜನಿಕರಿಂದ ಮರೆಮಾಡಲ್ಪಟ್ಟಿವೆ. ಅಲ್ಲದೆ, ರಾಹುಲ್ ಗಾಂಧಿ ಈಗ ಪ್ರಮಾಣೀಕೃತ ರಾಷ್ಟ್ರವಿರೋಧಿ ಎಂದು ಮಾಳವಿಯಾ ಗುಡುಗಿದ್ದಾರೆ.
2020ರ ಭಾರತ-ಚೀನಾ ಗಾಲ್ವಾನ್ ಕಣಿವೆಯ ಸಂಘರ್ಷದ ಸಮಯದಲ್ಲಿ ಭಾರತೀಯ ಅಧಿಕಾರಿಗಳ ಬದಲು ಚೀನಾದ ಅಧಿಕಾರಿಗಳಿಂದ ಬ್ರೀಫಿಂಗ್ ಸ್ವೀಕರಿಸಲು ರಾಹುಲ್ ಗಾಂಧಿ ಆಯ್ಕೆ ಮಾಡಿಕೊಂಡಿದ್ದರು ಎಂದು ಮಾಳವಿಯಾ ಟೀಕಾಪ್ರಹಾರ ನಡೆಸಿದ್ದಾರೆ.
ಸೋಮವಾರ ಸುಪ್ರೀಂ ಕೋರ್ಟ್ ಭಾರತದ ಭೂಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ಪ್ರಶ್ನಿಸಿದ ನಂತರ ಮಾಳವೀಯ ಅವರ ಹೇಳಿಕೆಯನ್ನು ನೀಡಿದ್ದಾರೆ.(ಏಜೆನ್ಸೀಸ್)