

ಬೆಂಗಳೂರು:
ಕೈಲಾಗದವರ ಕೊನೆಯ ಅಸ್ತ್ರವೇ ಆಪಪ್ರಚಾರ ಎಂದು ರಾಹುಲ್ ಗಾಂಧಿ ಅವರ ವಿರುದ್ದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಎಕ್ಸ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಚುನಾವಣಾ ಆಯೋಗ ಮತ್ತು ಮತದಾರರ ಪಟ್ಟಿಯ ಬಗ್ಗೆ ಮಾಡಿರುವ ಆರೋಪಗಳು ಆಧಾರರಹಿತ ಮತ್ತು ಸುಳ್ಳು ಎಂದಿದ್ದಾರೆ.
ಒಂದು ವೇಳೆ ನಿಮ್ಮ ಆರೋಪಗಳಿಗೆ ಪುರಾವೆ ಇದ್ದರೆ, ಮುಂದಿನ 7 ದಿನಗಳಲ್ಲಿ ಅಫಿಡವಿಟ್ ಸಲ್ಲಿಸಿ, ಇಲ್ಲದಿದ್ದರೆ ಇಡೀ ದೇಶಕ್ಕೆ ಕ್ಷಮೆಯಾಚಿಸಬೇಕು ಎಂದು ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗ ಈಗಾಗಲೇ ಪ್ರತ್ಯುತ್ತರ ಕೊಟ್ಟಿದೆ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವರ ಆರೋಪಗಳಲ್ಲಿ ಹುರುಳಿದ್ದರೆ ಚುನಾವಣಾ ಆಯೋಗಕ್ಕೆ ಪುರಾವೆ ಒದಗಿಸಬೇಕು. ಇಲ್ಲವಾದರೆ ದೇಶದ ಮತದಾರರಲ್ಲಿ ಕ್ಷಮೆ ಯಾಚಿಸಬೇಕು. ಅದು ಬಿಟ್ಟು ಹೀಗೆ ಹಾದಿ ಬೀದಿಯಲ್ಲಿ ಪೋಸ್ಟರ್ ಅಂಟಿಸಿ ನಮ್ಮ ದೇಶದ ಚುನಾವಣಾ ವ್ಯವಸ್ಥೆಗೆ, ಮತದಾರರಿಗೆ, ಜನಾದೇಶಕ್ಕೆ ಅಪಮಾನ ಮಾಡುವುದು ಯಾವ ಸೀಮೆ ನ್ಯಾಯ? ಎಂದು ಕೇಳಿದ್ದಾರೆ.
ಮತಗಳ್ಳತನ ಎಂಬ ಈ ನಾಟಕ ತಮ್ಮ ಮೂರ್ಖತನ ಪ್ರದರ್ಶನ ಮಾಡುತ್ತದೆಯೇ ಹೊರತು ಮತ್ತೇನೂ ಅಲ್ಲ. ನಿಮ್ಮ ಸೋಲಿನ ಹತಾಶೆಯಿಂದ ನಮ್ಮ ದೇಶದ ಚುನಾವಣಾ ವ್ಯವಸ್ಥೆಯ ಮೇಲೆ ಊಹಾಪೋಹ ಸೃಷ್ಟಿಸುವ ಪಾಪದ ಕೆಲಸ ಮಾಡಬೇಡಿ ಎಂದು ಕುಟುಕಿದ್ದಾರೆ.