ವಿದೇಶದಲ್ಲಿ ರಾಗಾ ವಿವಾದಕ್ಕೆ ವೇಗ: ಸೂಕ್ತ ಸಮಯದಲ್ಲಿ ಕಾಂಗ್ರೆಸ್​ನಿಂದಲೇ ಮೀಸಲಾತಿ ವ್ಯವಸ್ಥೆ ರದ್ದು ಎಂದು ರಾಹುಲ್

rg
Published on

ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾರತದ ಮೀಸಲಾತಿ ವ್ಯವಸ್ಥೆ ರದ್ದತಿ ಮತ್ತು ಜಾತಿಗಣತಿ ಕುರಿತು ಅಮೆರಿಕದಲ್ಲಿ ನೀಡಿರುವ ಹೇಳಿಕೆ ಭಾರಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಅಮೆರಿಕದ ಜಾರ್ಜ್​ಟೌನ್ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್, ‘ಭಾರತ ಯಾವಾಗ ಎಲ್ಲರಿಗೂ ನ್ಯಾಯಯುತ ಸ್ಥಳವಾಗಿ ಪರಿವರ್ತನೆ ಆಗುತ್ತದೆಯೋ ಆಗ ಕಾಂಗ್ರೆಸ್ ಈ ಮೀಸಲಾತಿ ವ್ಯವಸ್ಥೆ ರದ್ದುಪಡಿಸಲು ಬಯಸುತ್ತದೆ. ಸದ್ಯಕ್ಕೆ ಭಾರತ ಎಲ್ಲ ಜಾತಿ-ಜನಾಂಗಗಳಿಗೆ ನ್ಯಾಯಯುತ ಸ್ಥಳವಾಗಿಲ್ಲ’ ಎಂದು ಹೇಳಿದರು.

‘ನೂರು ರೂಪಾಯಿಗಳಲ್ಲಿ ಬುಡಕಟ್ಟು ಜನರಿಗೆ 10 ಪೈಸೆ, ದಲಿತರು ಮತ್ತು ಹಿಂದುಳಿದವರಿಗೆ ತಲಾ 5 ರೂ. ಸಿಗುತ್ತಿದೆ. ಅವರಿಗೆ ಸಿಗಬೇಕಾದ ಪ್ರಾತಿನಿಧ್ಯ ಸಿಗುತ್ತಿಲ್ಲ. ಶೇ. 90ರಷ್ಟು ಜನರಿಗೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸರ್ಕಾರದಲ್ಲಿ ಸರಿಯಾದ ಪ್ರಾತಿನಿಧ್ಯ ಸಿಗಬೇಕಿದೆ. ಇದು ನ್ಯಾಯದ ಪ್ರಶ್ನೆ. ಹಾಗಾಗಿ ಜಾತಿಗಣತಿ ಅನಿವಾರ್ಯ. ಈಗ ಮೀಸಲಾತಿಯೊಂದೇ ಪರಿಹಾರವಲ್ಲ, ಬೇರೆ ಪರಿಹಾರಗಳೂ ಇವೆ’ ಎಂದು ವಿವರಿಸಿದರು.

ಭಾರಿ ವಿವಾದ ಸೃಷ್ಟಿ: ರಾಹುಲ್ ಹೇಳಿಕೆಗೆ ಭಾರತದಾ ದ್ಯಂತ ಮಂಗಳವಾರ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ‘ಕಾಂಗ್ರೆಸ್ ಕೆಳಜಾತಿಗಾಗಿ ಏನೂ ಮಾಡಿಲ್ಲ. ಕಾಂಗ್ರೆಸ್​ನ ಕುತಂತ್ರಗಳ ಬಗ್ಗೆ ದಲಿತರು ಹುಷಾರಾಗಿರಬೇಕು’ ಎಂದು ಬಿಎಸ್​ಪಿ ನಾಯಕಿ ಮಾಯಾವತಿ ಹೇಳಿದ್ದಾರೆ. ‘ಮೀಸಲಾತಿ ಅಂತ್ಯಗೊಳಿಸುವ ಬಗ್ಗೆ ಯೋಚಿಸುವುದೂ ಪ್ರಜಾಪ್ರಭುತ್ವವಿರೋಧಿ ನಡೆ’ ಎಂದು ಲೋಕ ಜನಶಕ್ತಿ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

ಇಂಡಿಯೋ, ಇಂಡಿಯಾನೋ? : ಸಂವಾದದ ವೇಳೆ ವಿದ್ಯಾರ್ಥಿಯೊಬ್ಬ ‘ಐಎನ್​ಡಿಐಎ’ಯನ್ನು ಇಂಡಿ ಒಕ್ಕೂಟ ಎಂದು ಹೇಳಿದಾಗ ರಾಹುಲ್ ಗಾಂಧಿ ಕೂಡಲೇ ‘ಅದು ಇಂಡಿ ಅಲಯನ್ಸ್ ಅಲ್ಲ, ಇಂಡಿಯಾ ಅಲಯನ್ಸ್. ಬಿಜೆಪಿಯವರು ಮಾತ್ರ ಅದಕ್ಕೆ ಇಂಡಿ ಅಲಯನ್ಸ್ ಎನ್ನುತ್ತಾರೆ’ ಎಂದು ತಿದ್ದಿದರು. ಅಷ್ಟಕ್ಕೇ ಸುಮ್ಮನಾಗದ ವಿದ್ಯಾರ್ಥಿ, ‘ಹಾಗಾದರೆ ‘ಐಎನ್​ಡಿಐಎ’ಯಲ್ಲಿ ಕೊನೆಯ ಅಕ್ಷರ ಯಾವ ಪದವನ್ನು ಹೇಳುತ್ತದೆ?’ ಎಂದು ಪ್ರಶ್ನಿಸಿದ. ‘ಅಲಯನ್ಸ್’ ಎಂದು ಉತ್ತರಿಸಿದರು ರಾಹುಲ್. ‘ಹಾಗಾದರೆ ಇಂಡಿಯಾ ಎಂದ ನಂತರ ಅಲಯನ್ಸ್ ಎನ್ನುವುದೂ ಕೊನೇ ಪದದ ಪುನರಾವರ್ತನೆ ಅಲ್ಲವೇ’ ಎಂದು ವಿದ್ಯಾರ್ಥಿ ಪ್ರಶ್ನಿಸಿದ. ‘ಅದು ಹಾಗಲ್ಲ...’ ಎಂದು ರಾಹುಲ್ ಸಮರ್ಥನೆ ಮಾಡಿಕೊಂಡರೂ ಅದು ವಿದ್ಯಾರ್ಥಿಗೆ ಒಪ್ಪಿಗೆಯಾಗಲಿಲ್ಲ.

ವಿದೇಶಿ ನೆಲದಲ್ಲಿ ಭಾರತದ ಮಾನ ಹರಾಜು ಎಂದ ಬಿಜೆಪಿ : ಅಮೆರಿಕದಲ್ಲಿ ಅನಗತ್ಯ ಹೇಳಿಕೆಗಳನ್ನು ನೀಡುವ ಮೂಲಕ ರಾಹುಲ್ ಗಾಂಧಿಯವರು ವಿದೇಶಿ ನೆಲದಲ್ಲಿ ಭಾರತದ ಮಾನವನ್ನು ಹರಾಜು ಹಾಕುತ್ತಿದ್ದಾರೆ. ಭಾರತದ ಪ್ರತಿಷ್ಠೆಗೆ, ಇಲ್ಲಿನ ನಾಯಕರ ಮರ್ಯಾದೆಗೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ರಾಷ್ಟ್ರ ವಿರೋಧಿ ನಡೆಯಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್​ಸಿಂಗ್ ಚವ್ಹಾಣ್ ಟೀಕಿಸಿದ್ದಾರೆ. ಬಿಜೆಪಿಯ ಇತರ ಕೆಲವು ನಾಯಕರು ಮತ್ತು ತೆಲುಗುದೇಶಂ ಧುರೀಣರು ಕೂಡ ಇದೇ ರೀತಿಯ ವಾದ ಮುಂದೊಡ್ಡಿದ್ದಾರೆ.

ಸಿಖ್ಖರ ಬಗ್ಗೆಯೂ ಅನಗತ್ಯ ಹೇಳಿಕೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್​ಎಸ್​ಎಸ್ ವಿರುದ್ಧ ಸೋಮವಾರವಷ್ಟೇ ಅಮೆರಿಕದಲ್ಲಿ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ರಾಹುಲ್ ಗಾಂಧಿ, ಮಂಗಳವಾರ ಭಾರತದ ಸಿಖ್ಖರ ಕುರಿತು ಮಾತನಾಡಿ ವಿವಾದಕ್ಕೆ ಸಿಕ್ಕಿ ಹಾಕಿಕೊಂಡಿದ್ದಾರೆ. ‘‘ಭಾರತದಲ್ಲಿ ಸಿಖ್ಖರಿಗೆ ಪೇಟ ಧರಿಸಲು ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬುದು ಕೂಡ ನಮ್ಮ ರಾಜಕೀಯ ಹೋರಾಟದ ಭಾಗವಾಗಿದೆ’ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

‘‘ಮೊದಲನೆಯದಾಗಿ, ನಮ್ಮ ಹೋರಾಟ ಏನೆಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದು ರಾಜಕೀಯದ ಹೋರಾಟ ಅಲ್ಲ. ಉದಾಹರಣೆಗೆ, ಸಿಖ್ಖರಿಗೆ ಪೇಟಾ ಧರಿಸಲು ಅವಕಾಶ ನೀಡಲಾಗುವುದೇ ಅಥವಾ ಸಿಖ್ಖರಿಗೆ ಗುರುದ್ವಾರಕ್ಕೆ ಹೋಗಲು ಸಾಧ್ಯವಾಗುವುದೇ.. ಎಂಬ ಕುರಿತಾಗಿ. ಇದು ಸಿಖ್ ಮಾತ್ರವಲ್ಲ, ಎಲ್ಲ ಧರ್ಮಗಳಿಗೆ ಸಂಬಂಧಿಸಿದ ವಿಚಾರವಾಗಿದೆ’ ಎಂದು ರಾಹುಲ್ ವರ್ಜೀನಿಯಾದಲ್ಲಿ ಹೇಳಿದ್ದಾರೆ.

ಸತತ 3 ಸೋಲಿನ ಹತಾಶ: ಲೋಕಸಭೆ ವಿಪಕ್ಷ ನಾಯಕರಾಗಿದ್ದ ವಾಜಪೇಯಿ ಎಂದಿಗೂ ವಿದೇಶದಲ್ಲಿ ಭಾರತ ಸರ್ಕಾರದ ಮೇಲೆ ವಾಗ್ದಾಳಿ ನಡೆಸಲಿಲ್ಲ. ದೇಶದ ಪ್ರತಿಷ್ಠೆ ಕೆಡಿಸಲು ಯತ್ನಿಸಲಿಲ್ಲ. ಈಗ ಅಟಲ್ ಇದ್ದ ಸ್ಥಾನದಲ್ಲೇ ರಾಹುಲ್ ಇದ್ದಾರೆ. ಸತತ 3ನೇ ಬಾರಿಗೆ ಸೋಲು ಕಂಡಿರುವ ರಾಹುಲ್​ಗೆ ಮನಸ್ಸಿನಲ್ಲಿ ಬಿಜೆಪಿ, ಆರೆಸ್ಸೆಸ್, ಮೋದಿ ವಿರೋಧಿ ಭಾವನೆ ಬೇರೂರಿದೆ. ಭಾರತ್ ಜೋಡೋ ಯಾತ್ರೆ ಮಾಡಿದರೂ ಭಾರತದ ಜನರೊಂದಿಗೆ ಒಂದಾಗಲು ರಾಹುಲ್​ಗೆ ಸಾಧ್ಯವಿಲ್ಲ ಎಂದು ಕೇಂದ್ರ ಕೃಷಿ ಸಚಿವ ಚವ್ಹಾಣ್ ಹೇಳಿದ್ದಾರೆ.

ಕಾಂಗ್ರೆಸ್​ನಿಂದಲೇ ಸಿಖ್ಖರಿಗೆ ಅನ್ಯಾಯ: ನಾನು ಸಿಖ್ ಆಗಿ ಆರು ದಶಕಗಳಿಂದ ಪೇಟಾ ಧರಿಸಿದ್ದೇನೆ. ಹೆಚ್ಚು ಅವಧಿಗೆ ಕಡಾವನ್ನೂ ಧರಿಸಿದ್ದೇನೆ. ನನಗೆಂದೂ ಸಮಸ್ಯೆ ಸೃಷ್ಟಿಯಾಗಲಿಲ್ಲ. ಗಾಂಧಿ ಕುಟುಂಬ ಅಧಿಕಾರದಲ್ಲಿದ್ದಾಗ ಮಾತ್ರ ಭಾರತದ ಸಿಖ್ಖರು ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸಿದ್ದರು. ಒಂದು ಸಮುದಾಯವಾಗಿ ಇತಿಹಾಸದಲ್ಲಿ ಅತಿದೊಡ್ಡ ಆತಂಕ ಅನುಭವಿಸಿದ್ದೇವೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಕಾನೂನು ಕ್ರಮ ಬಿಜೆಪಿ ಎಚ್ಚರಿಕೆ: ಸಿಖ್ಖರ ಬಗ್ಗೆ ರಾಹುಲ್ ಮತ್ತೊಮ್ಮೆ ಟೀಕಿಸಿದರೆ ಅವರನ್ನು ಕೋರ್ಟ್​ಗೆ ಎಳೆಯುವುದಾಗಿ ಬಿಜೆಪಿ ರಾಷ್ಟ್ರೀಯ ವಕ್ತಾರ ಆರ್.ಪಿ. ಸಿಂಗ್ ಎಚ್ಚರಿಸಿದ್ದಾರೆ. 1984ರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೆಹಲಿಯಲ್ಲಿ 3000 ಸಿಖ್ಖರ ಪೇಟ ತೆಗೆೆದು, ಕೂದಲು ಕತ್ತರಿಸಿ, ಗಡ್ಡ ಬೋಳಿಸಿ ಕಗ್ಗೊಲೆ ಮಾಡಲಾಗಿತ್ತು. ರಾಹುಲ್ ಆ ಬಗ್ಗೆ ಮಾತನಾಡುವುದಿಲ್ಲ. ಮತ್ತೊಮ್ಮೆ ಸಿಖ್ಖರ ಬಗ್ಗೆ ಮಾತನಾಡಿದರೆ ರಾಹುಲ್​ರನ್ನು ಸುಮ್ಮನೆ ಬಿಡಲ್ಲ, ಕೇಸು ಹಾಕುತ್ತೇವೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net