

ಹನೂರು: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹೊಗೇನಕಲ್ ಫಾಲ್ಸ್ನಲ್ಲಿ ಸ್ಥಗಿತಗೊಳಿಸಿದ್ದ ತೆಪ್ಪ ಸಂಚಾರಕ್ಕೆ ಅರಣ್ಯ ಇಲಾಖೆ ಭಾನುವಾರದಿಂದ ಅವಕಾಶ ಕಲ್ಪಿಸಲಾಗಿದ್ದು, ಅಂಬಿಗರು ನಿಟ್ಟುಸಿರು ಬಿಟ್ಟಂತಾಗಿದೆ. ವ್ಯಾಪಾರಸ್ಥರಲ್ಲಿ ಸಮಾಧಾನ ಮೂಡಿಸಿದೆ.
ಧುಮ್ಮಿಕ್ಕುವ ಜಲಪಾತ, ಮೈದುಂಬಿರುವ ಕಾವೇರಿ ಒಡಲನ್ನು ವೀಕ್ಷಿಸಲು ಹಾಗೂ ಪ್ರಕೃತಿ ಸೌಂದರ್ಯವನ್ನು ಸವಿಯಲು ರಾಜ್ಯದ ವಿವಿಧೆಡೆಯಿಂದ ಹಾಗೂ ತಮಿಳುನಾಡಿನಿಂದ ಹೆಚ್ಚಿನ ಪ್ರವಾಸಿಗರು ಹೊಗೇನಕಲ್ ಫಾಲ್ಸ್ಗೆ ಆಗಮಿಸುತ್ತಾರೆ. ಇದರಲ್ಲಿ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆ ದಿನಗಳಂದು ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಇಲ್ಲಿ ಸುಮಾರು 350ಕ್ಕೂ ಹೆಚ್ಚು ಕುಟುಂಬಗಳು ಕಳೆದ 25 ವರ್ಷಗಳಿಂದಲೂ ತೆಪ್ಪ ನಡೆಸುವುದನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ತೆಪ್ಪ ನಡೆಸುವುದೇ ಇವರಿಗೆ ಪ್ರಮುಖ ಆದಾಯದ ಮೂಲವಾಗಿದೆ. ಆದರೆ ಕಳೆದ ವಾರದ ಹಿಂದೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾದ್ದರಿಂದ ಕೆಆರ್‌ಎಸ್ ಜಲಶಯದ ಮೂಲಕ 1.25 ಲಕ್ಷ ಕ್ಯೂಸೆಕ್‌ಗೂ ಹೆಚ್ಚು ಕಾವೇರಿ ನದಿಗೆ ಬಿಡಲಾಗಿತ್ತು. ಇದರಿಂದ ಹೊಗೇನಕಲ್ ಫಾಲ್ಸ್ನಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು. ಹಾಗಾಗಿ ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸುವುದರ ಜತೆಗೆ ತೆಪ್ಪ ಸಂಚಾರವನ್ನು ನಿಷೇಧಿಸಲಾಗಿತ್ತು. ಇದರಿಂದ ಅಂಬಿಗರು ಉದ್ಯೋಗವಿಲ್ಲದೆ ಕೈಕಟ್ಟಿ ಕೂರುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಕುಟುಂಬ ನಿರ್ವಹಣೆ ಕಷ್ಟವಾಗಿದ್ದು, ತುಂಬ ಸಮಸ್ಯೆಯನ್ನು ಎದುರಿಸುವಂತಾಗಿತ್ತು.
ಈ ಬಗ್ಗೆ ವಿಜಯವಾಣಿ ದಿನಪತ್ರಿಕೆ ಹೊಗೇನಕಲ್ನಲ್ಲಿ ತೆಪ್ಪ ಸಂಚಾರಕ್ಕೆ ಅವಕಾಶ ನೀಡಿ ಶೀರ್ಷಿಕೆಯಡಿ ಭಾನುವಾರ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಭಾನುವಾರದಿಂದ ತೆಪ್ಪ ಸಂಚಾರಕ್ಕೆ ಅನುಮತಿ ನೀಡಿ ಅನುಕೂಲ ಕಲ್ಪಿಸಿದ್ದಾರೆ. ಇದರಿಂದ ಕ್ರಿಯಾಶೀಲರಾದ ಅಂಬಿಗರು ನಿಟ್ಟುಸಿರು ಬಿಟ್ಟಂತಾಗಿದ್ದು, ಎಂದಿನಂತೆ ಕಾಯಕದಲ್ಲಿ ತೊಡಗಿದ್ದಾರೆ. ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆದೊಯ್ದು ಫಾಲ್ಸ್ ವೀಕ್ಷಿಸುವ ಹಾಗೂ ಪರಿಚಯಿಸುವ ಕೆಲಸವನ್ನು ಆರಂಭಿಸಿದ್ದಾರೆ.