

Radhika Yadav: ತಂದೆಯಿಂದಲೇ ಗುಂಡೇಟಿಗೆ ಬಲಿಯಾದ ರಾಷ್ಟ್ರ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಪ್ರಕರಣ ಸದ್ಯ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಒಬ್ಬ ತಂದೆಯೇ ಸಾಧನೆಯ ಹಾದಿಯಲ್ಲಿದ್ದ ಮಗಳನ್ನು ಗುಂಡಿಟ್ಟು ಕೊಲ್ಲುತ್ತಾರೆ ಎಂಬ ಸಂಗತಿ ನಿಜಕ್ಕೂ ಅರಗಿಸಿಕೊಳ್ಳಲು ಕಷ್ಟಸಾಧ್ಯ. ಈ ಪ್ರಕರಣ ದೇಶದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಹೆತ್ತ ಮಗಳನ್ನೇ ಕೊಲ್ಲುವಷ್ಟು ಸೇಡು ಆ ತಂದೆಗೆ ಏನಿತ್ತು ಎಂಬ ಪ್ರಶ್ನೆಗಳು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ತಂದೆ-ಮಗಳಿಗೆ ಸಂಬಂಧಿಸಿದಂತೆ ಹಲವು ಅಚ್ಚರಿ ವಿಚಾರಗಳು ಹೊರಬರುತ್ತಿವೆ.
ಮಗಳ ಸಾಧನೆಯ ಹಾದಿಗೆ ಅಡಿಪಾಯ ಹಾಕಿಕೊಟ್ಟಿದ್ದೇ ತಂದೆ ದೀಪಕ್ ಎನ್ನುವಾಗ ರಾಧಿಕಾಳನ್ನು ಟೆನಿಸ್ನಿಂದ ದೂರವಿರಲು ಆತ ಹೇಳಲು ಸಾಧ್ಯವೇ? ಗುಂಡಿಟ್ಟು ಕೊಲ್ಲುವ ಮನಸ್ಸು ಹೇಗೆ ಮೂಡಿತು? ಅನ್ನೋದೇ ನಂಬಲು ಅಸಾಧ್ಯ. ಇದರ ಹಿಂದೆ ಬೇರೇನೋ ಕಾರಣವಿರಬೇಕು ಎಂದು ದೀಪಕ್ ಪರಿಚಯಸ್ಥರೊಬ್ಬರು ಹೇಳಿದ್ದಾರೆ. ರಾಧಿಕಾಳ ಹತ್ಯೆ ಬಳಿಕ ಆಕೆ ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಮತ್ತು ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು ದೀಪಕ್ಗೆ ಇಷ್ಟವಿರಲಿಲ್ಲ ಎಂಬ ವಿಷಯಗಳು ಹೊರಬಿದ್ದಿವೆ. ಇದರ ಮಧ್ಯೆ ಮತ್ತೊಂದು ಸಂಗತಿ ಬಯಲಾಗಿದ್ದು, ರಾಧಿಕಾ ತನ್ನ ಕೋಚ್ಗೆ ಕಳುಹಿಸಿದ ವಾಟ್ಸ್ಆ್ಯಪ್ ಸಂದೇಶಗಳಲ್ಲಿ ತಾನು ಅನುಭವಿಸುತ್ತಿದ್ದ ನೋವನ್ನು ಹಂಚಿಕೊಂಡಿದ್ದಾಳೆ.
ತನ್ನ ಕೋಚ್ ಅಜಯ್‌ಗೆ ಕಳುಹಿಸಿರುವ ಸಂದೇಶದಲ್ಲಿ, "ನೋಡಿ, ಚೀನಾದಲ್ಲಿ ಆಹಾರ ಸಮಸ್ಯೆ ಎದುರಾಗುತ್ತೆ. ದುಬೈ, ಆಸ್ಟ್ರೇಲಿಯಾ ದೇಶಗಳಾದರೆ ಪರವಾಗಿಲ್ಲ. ನನಗೆ ಆಸ್ಟ್ರೇಲಿಯಾದಲ್ಲಿ ಕುಟುಂಬವಿದೆ. ಕೆಲವು ಕಾಲ ನಾನೊಬ್ಬಳೇ ಬದುಕಬೇಕು" ಎಂದು ರಾಧಿಕಾ ಹೇಳಿದ್ದಾರೆ. ಇದಕ್ಕೆ ಅಜಯ್ ವಾಯ್ಸ್ ನೋಟ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.
"1 ಅಥವಾ 2 ತಿಂಗಳುಗಳು. ನಾನು ಸ್ವಲ್ಪ ಸಮಯ ಇಲ್ಲಿಂದ ಹೊರಡಲು ಬಯಸುತ್ತೇನೆ. ಕುಟುಂಬವರು ಚೆನ್ನಾಗಿದ್ದಾರೆ. ಆದರೆ, ನಾನು ಸ್ವಲ್ಪ ಸಮಯದವರೆಗೆ ಸ್ವತಂತ್ರವಾಗಿ ಜೀವನ ಮಾಡಲು ಎದುರುನೋಡುತ್ತಿರುವೆ. ನಾನು ಖುಷಿಯಾಗಿರಲು ಬಯಸುತ್ತಿದ್ದೀನಿ. ಇಲ್ಲಿ ಸಾಕಷ್ಟು ನಿರ್ಬಂಧಗಳಿವೆ" ಎಂದಿದ್ದಾರೆ. ಇನ್ನೊಂದು ಚಾಟ್ನಲ್ಲಿ, "ನಾನು ನನ್ನ ತಂದೆಯೊಂದಿಗೆ ಮಾತನಾಡಿದೆ. ಆದರೆ, ಅವರು ಎಲ್ಲವನ್ನೂ ಕೇಳಿ ಕಡೆಗೆ ನಿರಾಕರಿಸಿದ್ದಾರೆ. ಅಪ್ಪ, ಯಾವುದೇ ಅರ್ಥವಿಲ್ಲ ಮತ್ತು ಹೆಚ್ಚು ಹಣ ಉಳಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ" ಎಂದು ಅಜಯ್‌ಗೆ ಹೇಳಿರುವುದಾಗಿ 'ಎನ್ಡಿಟಿವಿ' ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ,(ಏಜೆನ್ಸೀಸ್).