ಸಂಪುಟ ಕಸರತ್ತು ಜೋರು; ನಡ್ಡಾ ಭೇಟಿ ಮಾಡಿದ ರಮೇಶ್, ಯೋಗೇಶ್ವರ್

yogesh- ramesh
Published on

ಬೆಂಗಳೂರು/ನವದೆಹಲಿ: ಕರೊನಾ ಹಿನ್ನೆಲೆಯಲ್ಲಿ ನನೆಗುದಿಗೆ ಬಿದ್ದಿದ್ದ ಸಚಿವ ಸಂಪುಟ ಭರ್ತಿ ಪ್ರಕ್ರಿಯೆ ಮತ್ತೆ ಮುನ್ನೆಲೆಗೆ ಬಂದಿದೆ.

ಮೈತ್ರಿ ಸರ್ಕಾರದ ಪತನಕ್ಕೆ ಕಾರಣಕರ್ತರಲ್ಲಿ ಒಬ್ಬರಾದ ಸಿ.ಪಿ.ಯೋಗೇಶ್ವರ್ ಅವರಿಗೆ ವಿಧಾನಪರಿಷತ್ ಪ್ರವೇಶ ಸಿಗುತ್ತಿದ್ದಂತೆಯೇ ಮಂತ್ರಿ ಸ್ಥಾನಕ್ಕೂ ಇನ್ನಿಲ್ಲದ ಪೈಪೋಟಿ ಆರಂಭಿಸಿದ್ದಾರೆ. ತನ್ನ ಗೆಳೆಯ ಹಾಗೂ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಮುಂದಿಟ್ಟುಕೊಂಡು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿರುವ ಯೋಗೇಶ್ವರ್, ತಮಗೆ ಸಚಿವ ಸ್ಥಾನ ಕೊಡುವುದರಿಂದ ಪಕ್ಷಕ್ಕೆ ಆಗುವ ಲಾಭವೇನು ಎಂಬುದನ್ನು ವಿವರಿಸಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಈ ಭಾಗವನ್ನೇ ಪ್ರತಿನಿಧಿಸುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭವಿಷ್ಯದಲ್ಲಿ ಸಿಎಂ ಸ್ಥಾನದ ಆಕಾಂಕ್ಷಿ. ಸಹಜವಾಗಿ ಇಲ್ಲಿ ಡಿಕೆ ಹೆಚ್ಚಿನ ಸ್ಥಾನ ಗೆಲ್ಲಲು ಪ್ರಯತ್ನಿಸುತ್ತಾರೆ. ಇಂಥ ಸಂದರ್ಭದಲ್ಲಿ ತಮಗೆ ಸಚಿವ ಸ್ಥಾನ ಕೊಟ್ಟರೆ ಕೆಪಿಸಿಸಿ ಅಧ್ಯಕ್ಷರ ವರ್ಚಸ್ಸು ಕುಗ್ಗಿಸುವ ಕೆಲಸ ಮಾಡುವುದು ಅಥವಾ ಜೆಡಿಎಸ್- ಕಾಂಗ್ರೆಸ್ ನಡುವಿನ ಪೈಪೋಟಿಯಲ್ಲಿ ಬಿಜೆಪಿಗೆ ಒಂದಷ್ಟು ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಬಹುದು ಎಂಬ ಲೆಕ್ಕಾಚಾರವನ್ನೇ ಮುಂದಿಟ್ಟು ಯೋಗೇಶ್ವರ್ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದಾರೆ. ಇನ್ನು ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಈ ವಾರದಲ್ಲೇ ನಡೆಯಬಹುದು ಎಂಬ ಊಹಾಪೋಹವೂ ಇದೆ. ಆದರೆ ಮುಖ್ಯಮಂತ್ರಿ ಕಚೇರಿ ಮೂಲಗಳ ಪ್ರಕಾರ ಶುಕ್ರವಾರ ಸಿಎಂ ಕಬಿನಿ, ಕೆಆರ್​ಎಸ್​ಗೆ ಬಾಗಿನ ಬಿಡಲು ತೆರಳುವರು. ಒಂದು ವೇಳೆ ಸಂಪುಟ ಪ್ರಕ್ರಿಯೆ ನಡೆದರೂ ಆಗಸ್ಟ್ 4ನೇ ವಾರದಲ್ಲಿ ಎಂಬ ಅನಿಸಿಕೆ ಇದೆ.

ಇಷ್ಟರ ನಡುವೆ ಸಂಪುಟ ಭರ್ತಿ ಬಗ್ಗೆ ಹಸಿರು ನಿಶಾನೆ ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಜೆ.ಪಿ.ನಡ್ಡಾ ಒಟ್ಟಾಗಿ ಚರ್ಚೆ ಮಾಡಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಷಾ ಕರೊನಾ ಸೋಂಕಿನಿಂದ ಮುಕ್ತರಾಗಿ ಹೋ ಕ್ವಾರಂಟೈಂನ್​ನಲ್ಲಿದ್ದು ಯಾರನ್ನೂ ಭೇಟಿ ಮಾಡುತ್ತಿಲ್ಲ.

ಸಂಪುಟ ಭರ್ತಿಗೆ ಸದ್ಯದ ಪರಿಸ್ಥಿತಿಯಲ್ಲಿ ಅಷ್ಟು ಸಲೀಸಲ್ಲದ ವಾತಾವರಣವಿದೆ. ಆಕಾಂಕ್ಷಿಗಳ ಸಂಖ್ಯೆ ಬಹಳಷ್ಟಿದೆ. ಬಿಎಸ್​ವೈ ತಮ್ಮ ಅಭಿಪ್ರಾಯ, ಅನಿಸಿಕೆ ನೀಡಿ ಕೇಂದ್ರ ನಾಯಕರ ಒಪ್ಪಿಗೆ ಪಡೆಯಲು ಅಲ್ಲಿಗೆ ತೆರಳಬೇಕಾಗುತ್ತದೆ ಅಥವಾ ದೂರವಾಣಿಯಲ್ಲಿ ಚರ್ಚೆ ನಡೆಸಿ ಒಪ್ಪಿಗೆ ಪಡೆದುಕೊಳ್ಳಲೂಬಹುದು. ಈಗಿನ ಸನ್ನಿವೇಶದಲ್ಲಿ ಸಂಪುಟದ 6 ಸ್ಥಾನ ಭರ್ತಿ ಮಾಡಿಕೊಳ್ಳಲು ಅವಕಾಶವಿದೆ. ಎಂಟಿಬಿ ನಾಗರಾಜ್, ಆರ್. ಶಂಕರ್, ಉಮೇಶ್ ಕತ್ತಿ ಅವರಿಗೆ ಸ್ಥಾನ ಬಹುತೇಕ ಖಚಿತ. ಮುನಿರತ್ನ ಹಾಗೂ ಮಸ್ಕಿ ಪ್ರತಾಪ್ ಗೌಡ ಚುನಾವಣೆಯಲ್ಲಿ ಗೆದ್ದು ಬರುವವರೆಗೆ ಆ ಎರಡು ಸ್ಥಾನ ಬೇರೆಯವರಿಗೂ ನೀಡುವ ಅವಕಾಶ ಬಿಎಸ್​ವೈಗಿದೆ.

ಡಿಸಿಎಂ ಹುದ್ದೆಗೆ ರಮೇಶ್ ಮನವಿ: ಬಿಜೆಪಿ ಸೇರುವ ಮುನ್ನ ನೀಡಿರುವ ಭರವಸೆಯಂತೆ ಡಿಸಿಎಂ ಸ್ಥಾನ ನೀಡಬೇಕು ಎಂದು ರಮೇಶ್ ಜಾರಕಿಹೊಳಿ ವರಿಷ್ಠರಲ್ಲಿ ಕೋರಿದ್ದಾರೆನ್ನಲಾಗಿದೆ. ಮಂಗಳವಾರ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಜಾರಕಿಹೊಳಿ, ಯೋಗೇಶ್ವರ್ ಭೇಟಿ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net