ಆರ್ಯನ್​ ಖಾನ್​ಗೆ ಸಂಬಂಧಿಸಿದ ಡ್ರಗ್ಸ್​ ಪ್ರಕರಣದ ಪ್ರಮಖ ಸಾಕ್ಷಿ ಹೃದಯಾಘಾತದಿಂದ ನಿಧನ

Witness
Published on

ಮುಂಬೈ: ಬಾಲಿವುಡ್​ ಸೂಪರ್​ಸ್ಟಾರ್​ ಶಾರೂಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಭಾಗಿಯಾಗಿದ್ದಾರೆ ಎನ್ನಲಾದ ಡ್ರಗ್ಸ್​ ಪ್ರಕರಣದ ಪ್ರಮುಖ ಸಾಕ್ಷಿಧಾರ ಪ್ರಭಾಕರ್​ ಸೈಲ್​ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಮುಂಬೈನ ತಮ್ಮ ನಿವಾಸದಲ್ಲಿ ಪ್ರಭಾಕರ್​ ಸೈಲ್ ಶುಕ್ರವಾರ ಸಂಜೆ​ ಮೃತಪಟ್ಟಿದ್ದಾರೆ. ಇವರಿಗೆ 37 ವರ್ಷ ವಯಸ್ಸಾಗಿತ್ತು. ಅವರನ್ನು ಮುಂಬೈನ ಘಾಟ್‌ಕೋಪರ್‌ನಲ್ಲಿರುವ ರಾಜವಾಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಸೈಲ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪ್ರಭಾಕರ್ ಸೈಲ್ ಅವರ ವಕೀಲ ತುಷಾರ್ ಖಂಡಾರೆ ಅವರು ದೃಢಪಡಿಸಿದರು ಮತ್ತು ಅವರ ಕುಟುಂಬ ಸದಸ್ಯರು ಸಾವಿನಲ್ಲಿ ಯಾವುದೇ ಮೋಸದಾಟ ನಡೆದಿಲ್ಲ. ಆ ಬಗ್ಗೆ ನಮಗೆ ಸಂಶಯವಿಲ್ಲ ಎಂದು ತಿಳಿಸಿದ್ದಾರೆ.

ಎನ್‌ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಸಾಕ್ಷಿ ಕೆಪಿ ಗೋಸಾವಿಯ ಅಂಗರಕ್ಷಕ ಎಂದು ಹೇಳಿಕೊಂಡಿದ್ದ ಪ್ರಭಾಕರ್ ಸೈಲ್, ಕಳೆದ ವರ್ಷ ಅಕ್ಟೋಬರ್ 3 ರಂದು ಮುಂಬೈ ಕರಾವಳಿಯ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಆರ್ಯನ್ ಖಾನ್ ಅವರನ್ನು ಬಂಧಿಸಿದ ನಂತರ 25 ಕೋಟಿ ರೂ. ಪಾವತಿ ಒಪ್ಪಂದದ ಕುರಿತು ಗೋಸಾವಿ ಚರ್ಚಿಸಿದ್ದನ್ನು ಕೇಳಿದ್ದೇನೆ ಎಂದು ಅಫಿಡವಿಟ್‌ನಲ್ಲಿ ಆರೋಪಿಸಿದ್ದಾರೆ.

ಡ್ರಗ್ಸ್​ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಈ ಇತರ 19 ಮಂದಿಯೊಂದಿಗೆ ಆರ್ಯನ್ ಖಾನ್ ಅವರನ್ನು ಆರೋಪಿ ಎಂದು ಹೆಸರಿಸಿದೆ. ಆರೋಪಿಗಳ ವಿರುದ್ಧ ನಾರ್ಕೋಟಿಕ್ಸ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ನಿಷೇಧಿತ ಮಾದಕವಸ್ತುಗಳ ಸ್ವಾಧೀನ, ಸೇವನೆ, ಮಾರಾಟ/ಖರೀದಿ, ಪಿತೂರಿ ಮತ್ತು ಕುಮ್ಮಕ್ಕು ಇತ್ಯಾದಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣದಲ್ಲಿ ಬಂಧಿತರಾಗಿರುವ 20 ಆರೋಪಿಗಳ ಪೈಕಿ ಸದ್ಯ ಇಬ್ಬರು ಮಾತ್ರ ನ್ಯಾಯಾಂಗ ಬಂಧನದಲ್ಲಿದ್ದು, ಉಳಿದವರು ಜಾಮೀನಿನ ಮೇಲೆ ಹೊರಗಿದ್ದಾರೆ. ಆರ್ಯನ್​ ಖಾನ್​ಗೂ ಜಾಮೀನು ದೊರೆತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net