

ನವದೆಹಲಿ: ದೇಶದಲ್ಲಿ ಬಹು ಬಳಕೆಯಲ್ಲಿದ್ದ ವಿಎಲ್ಸಿ ಮೀಡಿಯಾ ಪ್ಲೇಯರ್ ಅನ್ನು ಭಾರತ ಸರ್ಕಾರ ಬ್ಯಾನ್ ಮಾಡಿದೆ. ಈ ವರ್ಷದ ಅರಂಭದಲ್ಲೇ ವಿಎಲ್ಸಿ ಮೀಡಿಯಾ ಪ್ಲೇಯರ್ ಬ್ಯಾನ್ ಮಾಡಿರುವುದಾಗಿ ಅದರ ಡೆವಲಪರ್ ವಿಡಿಯೋಲ್ಯಾನ್ ಕಂಪನಿ ಮಾಧ್ಯಮಕ್ಕೆ ತಿಳಿಸಿದೆ. ನಿಖರವಾಗಿ ಹೇಳುವುದಾದರೆ ಕಳೆದ ಫೆ. 13ರಂದು ವಿಎಲ್ಸಿ ಮೀಡಿಯಾ ಪ್ಲೇಯರ್ ಬ್ಯಾನ್ ಆಗಿದ್ದು, ಅಂದಿನಿಂದ ವಿಎಲ್ಸಿ ವೆಬ್ಸೈಟ್ನಲ್ಲಿ ಡೌನ್ಲೋಡ್ ಲಿಂಕ್ ಡೌನ್ ಆಗಿದೆ. ಆದಾಗ್ಯೂ ಈಗಾಗಲೇ ಈ ಸಾಫ್ಟ್ವೇರ್ ಅನ್ನು ಡೌನ್ಲೋಡ್ ಮಾಡಿಕೊಂಡಿರುವವರಿಗೆ ಇದರ ಲಭ್ಯತೆ ಇದೆ.
ವಿಎಲ್ಸಿ ಮೀಡಿಯಾ ಪ್ಲೇಯರ್ ಅನ್ನು ಸರ್ಕಾರ ಯಾಕೆ ಬ್ಯಾನ್ ಮಾಡಿದೆ ಎಂಬುದರ ಬಗ್ಗೆ ನಮಗೆ ಯಾವುದೇ ಸುಳಿವು ಇಲ್ಲ. ಆದರೆ, ಬ್ಯಾನ್ ಆಗಿರುವುದು ನಿಜ ಎಂದು ವಿಡಿಯೋಲ್ಯಾನ್ ಕಂಪನಿ ಅಧಿಕೃತವಾಗಿ ತಿಳಿಸಿದೆ. ಆದರೆ, ಈವರೆಗೂ ಈ ಬಗ್ಗೆ ತಿಳಿದೇ ಇರಲಿಲ್ಲ. ಈ ಸಾಫ್ಟ್ವೇರ್ ಅನ್ನು ಯಾವ ಕಾರಣಕ್ಕೆ ಸರ್ಕಾರ ಬ್ಯಾನ್ ಮಾಡಿದೆ ಎಂಬ ಅಧಿಕೃತ ಮಾಹಿತಿ ಇನ್ನು ತಿಳಿದುಬಂದಿಲ್ಲ. ಆದರೆ, ಕೆಲವೊಂದು ಮೂಲಗಳು ಹೇಳುವ ಪ್ರಕಾರ ಚೀನಾ ಮೂಲದ ಹ್ಯಾಕಿಂಗ್ ಗ್ರೂಪ್ ಸಿಕಾಡಾ ವಿಎಲ್ಸಿ ಮೀಡಿಯಾ ಪ್ಲೇಯರ್ ಬಳಸಿಕೊಂಡು ಸೈಬರ್ ದಾಳಿ ನಡೆಸುತ್ತಿದೆ ಎಂದು ಹೇಳಲಾಗಿದೆ.
ಐಟಿ ಕಾಯಿದೆ 2000ರ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಆದೇಶದಂತೆ ವಿಎಲ್ಸಿ ಮೀಡಿಯಾ ಪ್ಲೇಯರ್ ಅನ್ನು ನಿರ್ಬಂಧಿಸಲಾಗಿದೆ ಎಂಬ ಸಂದೇಶವನ್ನು ವಿಎಲ್ಸಿ ಮೀಡಿಯಾ ಪ್ಲೇ ವೆಬ್ಸೈಟ್ ತೋರಿಸುತ್ತದೆ.
ವಿಎಲ್ಸಿ ಮೀಡಿಯಾ ಪ್ಲೇಯರ್ ಕೆಲವು ಐಎಸ್ಪಿ ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು VideoLAN ಅಧ್ಯಕ್ಷರು ಬಹಿರಂಗಪಡಿಸಿದ್ದಾರೆ. ಬ್ಯಾನ್ ಕುರಿತು ಮಾತನಾಡಿರುವ ಅವರು, ಕೆಲವು ತಿಂಗಳುಗಳಿಂದ ನಾವು ಬ್ಯಾನ್ ಎದುರಿಸುತ್ತಿದ್ದೇವೆ. ಆದರೆ, ಏಕೆ ಎಂಬುದು ಗೊತ್ತಿಲ್ಲ. ನಾವು ಈ ಬಗ್ಗೆ ಭಾರತ ಸರ್ಕಾರವನ್ನು ಪ್ರಶ್ನಿಸಿದ್ದೇವೆ. ಆದರೆ, ಈವರೆಗೂ ಯಾವುದೇ ಉತ್ತರ ಬಂದಿಲ್ಲ. ವಿಚಿತ್ರ ಅಂದರೆ, ಕೆಲವು ಐಎಸ್ಪಿಗಳಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. VLC ಮತ್ತು VideoLAN ರಾಜಕೀಯದಿಂದ ಆಚೆಗೆ ಕಾರ್ಯನಿರ್ವಹಿಸುತ್ತವೆ. VLC ಒಂದು ಶುದ್ಧ ಸಾಧನವಾಗಿದೆ ಎಂದು ಅದರ ಅಧ್ಯಕ್ಷರು ಹೇಳಿದ್ದಾರೆ.
ಪ್ರಸ್ತುತ VLC ಮೀಡಿಯಾ ಪ್ಲೇಯರ್ ವೆಬ್ಸೈಟ್ ಮತ್ತು ಡೌನ್ಲೋಡ್ ಲಿಂಕ್ ಅನ್ನು ನಿರ್ಬಂಧಿಸಲಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಈಗಾಗಲೇ VLC ಪ್ಲೇಯರ್ ಅನ್ನು ಸ್ಥಾಪಿಸಿರುವ ಬಳಕೆದಾರರು ತಮ್ಮ ಮಾಧ್ಯಮ ಫೈಲ್ಗಳನ್ನು ವೀಕ್ಷಿಸಲು ಅದನ್ನು ಬಳಸಲು ಸಾಧ್ಯವಾಗುತ್ತದೆ. ಹೊಸ ಬಳಕೆದಾರರು ವಿಎಲ್ಸಿ ಪಡೆಯಲಾಗದು. ಯಾವುದೇ ನಿರ್ದಿಷ್ಟ ಹಂತದಲ್ಲಿ VLC ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಕಂಪನಿ ಹೇಳಿದೆ.
ನಮ್ಮ ಸರ್ವರ್ಗಳಿಲ್ಲದೆ VLC ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತದೆ: ನಾವು ಮಾಹಿತಿಯನ್ನು ಸಂಗ್ರಹಿಸುವುದಿಲ್ಲ, ನಮಗೆ ಬಳಕೆದಾರರ ಖಾತೆಗಳ ಅಗತ್ಯವಿಲ್ಲ, ನಾವು ಜನರ ಮೇಲೆ ಕಣ್ಣಿಡುವುದಿಲ್ಲ. ಆದ್ದರಿಂದ ನೀವು ಒಮ್ಮೆ VLC ಅನ್ನು ಹೊಂದಿದ್ದರೆ, ಅದು ಕಾರ್ಯನಿರ್ವಹಿಸಲು ನಿಮಗೆ ನಮ್ಮ ಸರ್ವರ್ಗಳ ಅಗತ್ಯವಿಲ್ಲ ಎಂದು ಕಂಪನಿ ತಿಳಿಸಿದೆ.
VLC ಮೀಡಿಯಾ ಪ್ಲೇಯರ್ ಅನ್ನು ದೇಶದಲ್ಲಿ ಏಕೆ ನಿಷೇಧಿಸಲಾಗಿದೆ ಎಂಬುದನ್ನು ಭಾರತ ಸರ್ಕಾರ ಇನ್ನೂ ದೃಢಪಡಿಸಿಲ್ಲ. ಮತ್ತೊಂದೆಡೆ, ಹಠಾತ್ ನಿಷೇಧದ ಹಿಂದಿನ ಕಾರಣದ ಬಗ್ಗೆ ಯಾವುದೇ ಸುಳಿವು ಇಲ್ಲದ ಕಾರಣ ಮೀಡಿಯಾ ಪ್ಲೇಯರ್ ಟ್ವಿಟರ್ನಲ್ಲಿ ಸಹಾಯವನ್ನು ಕೋರುತ್ತಿದೆ. ಮುಂದೆ ಯಾವ ಬೆಳವಣಿಗೆ ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)