

ಪಟನಾ: ಸರ್ಕಾರಿ ಆಸ್ಪತ್ರೆಯ ಕಳಪೆ ನಿರ್ವಹಣೆಯನ್ನು ಮೊಬೈಲ್ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಇಬ್ಬರು ಯುವಕರನ್ನು ರೂಮಿನಲ್ಲಿ ಕೂಡಿ ಹಾಕಿ, ಸ್ಟಾಫ್ ನರ್ಸ್ಗಳಿಬ್ಬರು ಹಲ್ಲೆ ಮಾಡಿರುವ ಘಟನೆ ಬಿಹಾರದ ಆಸ್ಪತ್ರೆಯೊಂದರಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಬಿಹಾರ ಸರಣ್ ಜಿಲ್ಲೆಯಲ್ಲಿರುವ ಛಪ್ರಾ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ವಿಡಿಯೋದಲ್ಲಿ ನರ್ಸ್ ಒಬ್ಬರು ದೊಣ್ಣೆಯನ್ನು ಹಿಡಿದು ಯುವಕರಿಗೆ ಬಾರಿಸುತ್ತಿರುವುದು ಮತ್ತು ಇನ್ನೊಬ್ಬ ನರ್ಸ್ ಆಕೆಯ ಸಹಾಯ ಮಾಡುತ್ತಿರುವ ದೃಶ್ಯವಿದೆ. ಬಿಟ್ಟು ಬಿಡಿ ಎಂದು ಯುವಕರು ಕೇಳಿಕೊಂಡರು ನಿರ್ದಾಕ್ಷಿಣ್ಯವಾಗಿ ಇಬ್ಬರ ಮೇಲೆ ನರ್ಸ್ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯ ಕಳಪೆ ನಿರ್ವಹಣೆಯನ್ನು ಚಿತ್ರೀಕರಿಸುತ್ತಿದ್ದ ಯುವಕರನ್ನು ನರ್ಸ್ ರೂಮಿನಲ್ಲಿ ಕೂಡಿ ಹಾಕಿ ಥಳಿಸಿದ್ದಾರೆಂದು ವರದಿಯಾಗಿದೆ. ವರದಿಗಳ ಪ್ರಕಾರ, ಯುವಕರು ವೈದ್ಯಕೀಯ ಪ್ರಮಾಣಪತ್ರವನ್ನು ಪಡೆಯಲು ಆಸ್ಪತ್ರೆಗೆ ಬಂದಿದ್ದರು. ಆದರೆ, ಆಸ್ಪತ್ರೆಯಲ್ಲಿನ ಅಸಮರ್ಥತೆಯನ್ನು ಕಂಡು, ಅದನ್ನು ಚಿತ್ರೀಕರಿಸಲು ಪ್ರಾರಂಭಿಸಿದರು. ಈ ವೇಳೆ ಯುವಕರನ್ನು ಕಂಡ ನರ್ಸ್, ಇಬ್ಬರನ್ನು ರೂಮಿನಲ್ಲಿ ಬಂಧಿಸಿ, ಥಳಿಸಿದ್ದಾರೆ. ಅಲ್ಲದೆ, ಯುವಕರಿಗೆ ಛೀಮಾರಿ ಹಾಕಿದ್ದು, ಇಲ್ಲಿ ವಿಡಿಯೋ ಮಾಡುವ ಬದಲಿಗೆ ನಿಮ್ಮ ತಾಯಿ ಮತ್ತು ಸಹೋದರಿಯನ್ನು ಚಿತ್ರೀಕರಿಸಿ ಎಂದು ನಿಂದಿಸಿರುವುದು ವಿಡಿಯೋದಲ್ಲಿ ಕೇಳಿಬರುತ್ತಿದೆ. ಇದರ ಜೊತೆಗೆ ಆಸ್ಪತ್ರೆಯ ಸಿಬ್ಬಂದಿ ಕೂಡ ವಿಡಿಯೋ ಡಿಲೀಟ್ ಮಾಡುವಂತೆ ಒತ್ತಡ ಹೇರಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ನರ್ಸ್ಗಳ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. (ಏಜೆನ್ಸೀಸ್)