

ನವದೆಹಲಿ: ದೆಹಲಿಯ ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರು ತನ್ನ ತಾಯಿ ಮತ್ತು ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಮುಂದೆಯೇ ತನ್ನ ವಯಸ್ಸಾದ ಮಾವನ ಕೆನ್ನೆಗೆ ಬಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಲಕ್ಷ್ಮೀ ನಗರದ ಹಲ್ಲೆಗೊಳಗಾದ ವಯಸ್ಸಾದ ವ್ಯಕ್ತಿಯ ನಿವಾಸದಲ್ಲಿ ಭಾನುವಾರ ನಡೆದಿದೆ. ಪೊಲೀಸ್ ಸಿಬ್ಬಂದಿಯೊಬ್ಬರು ಮಧ್ಯ ಪ್ರವೇಶಿಸುವವರೆಗೂ ತನ್ನ ಮಾವನಿಗೆ ಮಹಿಳಾ ಎಸ್ಐ ಅನೇಕ ಬಾರಿ ಕಪಾಳ ಮೋಕ್ಷ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯದಲ್ಲಿದೆ.
ಹಲ್ಲೆ ಮಾಡುವ ಮುನ್ನ ಎಸ್ಐ ಮತ್ತು ಅವರ ತಾಯಿ, ವಯಸ್ಸಾದ ವ್ಯಕ್ತಿಯ ಜೊತೆ ವಾಗ್ವಾದ ನಡೆಸಿದ್ದಾರೆ. ಮಾತಿಗೆ ಮಾತು ಬೆಳೆದು ಕೊನೆಗೆ ತಾಳ್ಮೆ ಕಳೆದುಕೊಂಡ ಮಹಿಳಾ ಎಸ್ಐ, ತನ್ನ ಮಾವನ ಮೇಲೆ ಹಲ್ಲೆ ಮಾಡಿದ್ದಾರೆ. ಆಕೆಯ ತಾಯಿಯು ಕೂಡ ಇದಕ್ಕೆ ಸಾಥ್ ನೀಡಿದ್ದಾರೆ.
ಆರೋಪಿ ಮಹಿಳಾ ಎಸ್ಐರನ್ನು ದೆಹಲಿಯ ಡಿಫೆನ್ಸ್ ಕಾಲನಿ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿದೆ. ಇದರ ನಡುವೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಮಾವನ ವಿರುದ್ಧ ಕೋರ್ಟ್ನಲ್ಲಿ ದಾವೆ ಹೂಡಿದ್ದು, ಈ ವಿಚಾರವಾಗಿ ಜಗಳ ನಡೆದಿದೆ ಎಂದು ತಿಳಿದುಬಂದಿದೆ.
ಸದ್ಯ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದ್ದು, ಆರೋಪಿ ಎಸ್ಐ ವಿರುದ್ಧ ಇಲಾಖಾ ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್)