

ಬೆಂಗಳೂರು: ಚಂದ್ರಕಾಂತ್ ನಿರ್ದೇಶನದ “ತ್ರಿಕೋನ’ ಚಿತ್ರದ ಟ್ರೇಲರ್ ಇಂದು (ಮಾ.25) ಬಿಡುಗಡೆಯಾಗಿದೆ. ಜೀವನದ ಸಂದೇಶದ ಜತೆಗೆ ಮಿಸ್ಟರಿ, ಥ್ರಿಲ್ಲರ್ ಅಂಶವಿರುವ ಚಿತ್ರದ ಟ್ರೇಲರ್ ಭರವಸೆ ಮೂಡಿಸಿದೆ.
ಶಕ್ತಿ ಇದ್ದ ಕಡೆ ಕೋಪ, ವಿದ್ಯ ಇದ್ದ ಕಡೆ ಅಹಂ ಮತ್ತು ಅನುಭವ ಇದ್ದ ಕಡೆ ತಾಳ್ಮೆ ಎಂಬ ಸಂದೇಶವುಳ್ಳ ಡೈಲಾಗ್ನೊಂದಿಗೆ ಟ್ರೇಲರ್ ಆರಂಭವಾಗುತ್ತದೆ. ಇಡೀ ಟ್ರೇಲರ್ನಲ್ಲಿ ನಿಗೂಢತೆ ಆವರಿಸಿದ್ದು, ಹಿನ್ನಲೆ ಧ್ವನಿ ಪ್ರೇಕ್ಷರನ್ನು ಸೆಳೆಯುತ್ತದೆ. 2.32 ನಿಮಿಷದ ಟ್ರೇಲರ್ನಲ್ಲೇ ಪ್ರೇಕ್ಷಕರನ್ನು ಸೆಳೆಯುವಂತಹ ಅಂಶಗಳಿದ್ದು, ಇಡೀ ಚಿತ್ರ ಅದ್ಭುತವಾಗಿ ಮೂಡಿಬಂದಿರುವುದಾಗಿ ಸುಳಿವು ನೀಡಿದೆ. A2 ಮ್ಯೂಸಿಕ್ ಚಾನೆಲ್ನಲ್ಲಿ ಟ್ರೇಲರ್ ಬಿಡುಗಡೆಯಾಗಿದ್ದು, ಅದ್ಭುತ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ತ್ರಿಕೋನ ಚಿತ್ರ ಏ.1ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಕುರಿತು ಈಗಾಗಲೇ ಮಾತನಾಡಿರುವ ಚಂದ್ರಕಾಂತ್, ‘ಮೂರು ವಿಭಿನ್ನ ತಲೆಮಾರು ಮತ್ತು ವಯೋಮಾನದ ಜನರ ಮೂಲಕ ಈ ಕಥೆ ಹೇಳುತ್ತಿದ್ದೇವೆ. ಒಂದು ನಟನೆಯನ್ನು ಈ ಮೂರು ತಲಮಾರಿನವರು ಹೇಗೆ ಎದುರಿಸುತ್ತಾರೆ ಮತ್ತು ಒಂದು ಸಮಸ್ಯೆಯನ್ನು ತಾಳ್ಮೆ, ಅಹಂ ಮತ್ತು ಶಕ್ತಿಯಿಂದ ಎದುರಿಸಿದಾಗ ಏನೆಲ್ಲ ಆಗುತ್ತದೆ ಎಂದು ಹೇಳುವ ಪ್ರಯತ್ನ ಇದು’ ಎನ್ನುತ್ತಾರೆ ಚಂದ್ರಕಾಂತ್.
ಈ ಚಿತ್ರದಲ್ಲಿ ಸುರೇಶ್ ಹೆಬ್ಳೀಕರ್, ಲಕ್ಷ್ಮೀ, ಅಚ್ಯುತ್ ಕುಮಾರ್, ಸುಧಾರಾಣಿ, ರಾಜವೀರ್, ಮಾರುತೇಶ್, ಸಾಧು ಕೋಕಿಲ ಮುಂತಾದವರು ನಟಿಸಿದ್ದಾರೆ. ಸಾಧು ಕೋಕಿಲ ಒಂದು ವಿಶೇಷ ಪಾತ್ರದಲ್ಲಿ ನಗಿಸಲಿದ್ದಾರೆ. ಇದಕ್ಕೂ ಮುನ್ನ ‘ಪೆರೋಲ್’, ‘ಬರ್ಫಿ’ ಮತ್ತು ‘ಅಮೃತವಾಣಿ’ ಚಿತ್ರಗಳನ್ನು ನಿರ್ಮಿಸಿದ್ದ ರಾಜಶೇಖರ್ ಈ ಚಿತ್ರಕ್ಕೆ ಕಥೆ ಬರೆಯುವುದರ ಜತೆಗೆ ನಿರ್ದೇಶಿಸಿದ್ದಾರೆ.
ಈಗಾಗಲೇ ‘ತಗ್ಗಿ ನಡಿ ಸುಮ್ಮನೆ …’, ‘ಗುಡಿಯಲ್ಲಿರೋ ದೇವ …’ ಮುಂತಾದ ಲಿರಿಕಲ್ ವಿಡಿಯೋಗಳ ಜತೆಗೆ, ಟೀಸರ್ ಸಹ ಬಿಡುಗಡೆಯಾಗಿದೆ. ಚಿತ್ರಕ್ಕೆ ಸುರೇಂದ್ರನಾಥ್ ಸಂಗೀತ ಮತ್ತು ಶ್ರೀನಿವಾಸ್ ವಿನ್ನಕೋಟ ಛಾಯಾಗ್ರಹಣವಿದೆ.