ತೋಟಕ್ಕೆ ಹೋದ ಸಹೋದರಿಯರು ಸಂಜೆಯಾದ್ರೂ ಬರಲೇ ಇಲ್ಲ: ಹುಡುಕಿ ಹೊರಟ ತಾಯಿಗೆ ಕಾದಿತ್ತು ಶಾಕ್​!

Sisters
Published on

ನಿರ್ಮಲ್ (ತೆಲಂಗಾಣ): ಸೆಲ್ಫಿ ತೆಗೆಯುಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಮೂವರು ಸಹೋದರಿಯರು ದಾರುಣವಾಗಿ ಮೃತಪಟ್ಟಿರುವ ಘಟನೆ ತೆಲಂಗಾಣದ ನಿರ್ಮಲ್​ ಜಿಲ್ಲೆಯಲ್ಲಿ ನಡೆದಿದೆ.

ಎಲ್ಮೆ ದಾದಾರಾವ್ ಮತ್ತು ಮಂಗಳಬಾಯಿ ದಂಪತಿ​ ನಿರ್ಮಲ್​ ಜಿಲ್ಲೆಯ ನೂರ್​ ವಲಯದ ಸಿಂಗಿಂಗಮ್ ಗ್ರಾಮ ನಿವಾಸಿಗಳು. ದಂಪತಿಗೆ ಸ್ಮಿತಾ, ವೈಶಾಲಿ ಹೆಸರಿನ ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಗಂಡು ಮಗನಿದ್ದಾನೆ.

ಭಾನುವಾರ ಮಧ್ಯಾಹ್ನ ಸ್ಮಿತಾ ಮತ್ತು ವೈಶಾಲಿ ತಮ್ಮ ತಾಯಿಯ ಜತೆ ತೋಟಕ್ಕೆ ತೆರಳಿದರು. ಹೋಗುವಾಗ ತಮ್ಮ ಜತೆಯಲ್ಲಿ ಸೋದರಸಂಬಂಧಿ ಲಾಹುಬಂಡೆ ಅಂಜಲಿಯನ್ನು ಕರೆದುಕೊಂಡು ಹೋಗಿದ್ದಾರೆ. ತೋಟದಲ್ಲಿ ಕೆಲವೊತ್ತು ಉಳಿದುಕೊಂಡ ಅವರು ಸೆಲ್ಫಿಗಳು ತೆಗೆದುಕೊಳ್ಳುತ್ತಾ ತೋಟವನ್ನು ಸುತ್ತು ಹಾಕಿದರು.

ಸ್ವಲ್ಪ ಸಮಯದ ನಂತರ ತಾಯಿ ಮಂಗಳಬಾಯಿ ಮನೆಗೆ ಹಿಂದಿರುಗಿದರೆ, ಮೂವರು ಸಹೋದರಿಯರು ಅಲ್ಲಿಯೇ ಇದ್ದ ಕೆರೆಯ ಬಳಿಗೆ ತೆರಳಿದರು. ಈ ವೇಳೆ ಸೆಲ್ಫಿ ತೆಗೆಯುವಾಗ ಮೂವರು ಆಕಸ್ಮಿಕವಾಗಿ ಕೆರೆಯೊಳಗೆ ಬಿದ್ದಿದ್ದಾರೆ. ಸ್ಮಿತಾ (17), ವೈಶಾಲಿ (14) ಮತ್ತು ಅಂಜಲಿ (16) ಈಜು ಬರದೇ ದುರಂತ ಸಾವಿಗೀಡಾಗಿದ್ದಾರೆ.

ಸಂಜೆಯಾದರೂ ಮಕ್ಕಳು ಮನೆಗೆ ಬಾರದಿದ್ದಾಗ ತೋಟಕ್ಕೆ ತೆರಳಿದ ಮಂಗಳಬಾಯಿ ಮಕ್ಕಳಿಗಾಗಿ ಹುಡುಕಾಡಿದ್ದಾರೆ. ಅವರು ಪತ್ತೆಯಾಗದಿದ್ದಾಗ ಸಂಬಂಧಿಕರಿಗೆ ಆಕೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಸೋಮವಾರ ಬೆಳಗ್ಗೆ ಕುಟುಂಬದ ಸದಸ್ಯರು ಕೆರೆಯ ಸಮೀಪ ಹೋಗಿ ನೋಡಿದಾಗ ಎಲ್ಲರು ಬೆಚ್ಚಿಬಿದ್ದಿದ್ದಾರೆ. ಮೂವರೂ ಕೂಡ ಶವವಾಗಿ ಕೆರೆಯಲ್ಲಿ ತೇಲುತ್ತಿದ್ದರು. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net