

ಮುಂಬೈ: ಕಾಶ್ಮೀರಿ ಪಂಡಿತರ ನರಮೇಧದ ಭಯಾನಕ ಚಿತ್ರಣವನ್ನು "ದಿ ಕಾಶ್ಮೀರ್ ಫೈಲ್ಸ್" ಸಿನಿಮಾ ಮೂಲಕ ತೆರೆಯ ಮೇಲೆ ತರುವ ಮೂಲಕ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಈ ಒಂದು ಸಿನಿಮಾ ಮೂಲಕ ವಿವೇಕ್ ಅದೃಷ್ಟವೇ ಬದಲಾಗಿದ್ದು, ಅದಕ್ಕೆ ಉದಾಹರಣೆ ಎಂಬಂತೆ ವಾಣಿಜ್ಯ ನಗರಿ ಮುಂಬೈನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ಖರೀದಿ ಮಾಡಿದ್ದಾರೆ.
ವಿವೇಕ್ ಅವರು ತಮ್ಮ ಪತ್ನಿ ಹಾಗೂ ನಟಿ ಪಲ್ಲವಿ ಜೋಶಿ ಅವರೊಂದಿಗೆ ಅಂಧೇರಿಯ ಐಷಾರಾಮಿ ವರ್ಸೋವಾ ಪ್ರದೇಶದಲ್ಲಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ. ಈ ಅಪಾರ್ಟ್ಮೆಂಟ್ 3,258 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ. ರಾಯಸ್ಕರನ್ ಪಾರ್ಥೆನಾನ್‌ನಲ್ಲಿರುವ 30ನೇ ಮಹಡಿಯಲ್ಲಿ ಈ ಅಪಾರ್ಟ್ಮೆಂಟ್ ಇದೆ.
ಅಪಾರ್ಟ್‌ಮೆಂಟ್‌ನ ಅನ್ನು 17.92 ಕೋಟಿ ರೂಪಾಯಿಗೆ ಖರೀದಿಸಿದ್ದಾರೆಂದು ತಿಳಿದುಬಂದಿದೆ. ಅಪಾರ್ಟ್‌ಮೆಂಟ್‌ನ ಮೌಲ್ಯ ಪ್ರತಿ ಚದರ ಅಡಿಗೆ ಸುಮಾರು 55,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಖರೀದಿ ಒಪ್ಪಂದಕ್ಕೆ ಮುದ್ರಾಂಕ ಶುಲ್ಕವೇ 1.07 ಕೋಟಿ ರೂ. ಖರ್ಚಾಗಿದೆ ಎನ್ನಲಾಗಿದೆ.
ಈ ಅಪಾರ್ಟ್ಮೆಂಟ್ನಲ್ಲಿ ಮೂರು ಕಾರು ಪಾರ್ಕಿಂಗ್ ಸ್ಲಾಟ್‌ಗಳು ಇದೆ. ಈ ಆಸ್ತಿಯನ್ನು ಸೆಪ್ಟೆಂಬರ್ 27 ರಂದು ನೋಂದಾಯಿಸಲಾಗಿದೆ. ಕುತೂಹಲಕಾರಿ ಸಂಗತಿಯೇನೆಂದರೆ, ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಕೆಲವು ದಿನಗಳ ಹಿಂದೆ ಕಟ್ಟಡದಲ್ಲಿ ಸಂಪೂರ್ಣ 31 ನೇ ಮಹಡಿಯನ್ನು ಖರೀದಿಸಿದ್ದರು.
ಅಂದಹಾಗೆ ವಿವೇಕ್ ಅವರ 'ದಿ ಕಾಶ್ಮೀರ್ ಫೈಲ್ಸ್' 2022ರಲ್ಲಿ ತೆರೆಕಂಡ ಅತಿದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಗಿದೆ. ಇದು ಕೇವಲ 15 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಿಸಲ್ಪಟ್ಟಿದ್ದರೂ, ಇದು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 340 ಕೋಟಿ ರೂಪಾಯಿಗಳನ್ನು ಗಳಿಸಿತು. ವಿವೇಕ್ ಈಗ ತಮ್ಮ ಮುಂದಿನ ನಿರ್ದೇಶನದ 'ದಿ ಡೆಲ್ಲಿ ಫೈಲ್ಸ್' ಎಂಬ ಶೀರ್ಷಿಕೆಯ ಕೆಲಸವನ್ನು ಪ್ರಾರಂಭಿಸಿದ್ದಾರೆ. ವರದಿಗಳನ್ನು ನಂಬುವುದಾದರೆ, ಚಿತ್ರವು 1984 ರ ಸಿಖ್ ವಿರೋಧಿ ದಂಗೆಯನ್ನು ಆಧರಿಸಿದೆ. (ಏಜೆನ್ಸೀಸ್)