

ನ್ಯೂಯಾರ್ಕ್: ಮಂಗಳವಾರ ಶಸ್ತ್ರಧಾರಿ ಯುವಕನೊಬ್ಬ ಅಮೆರಿಕದ ಟೆಕ್ಸಾಸ್ನಲ್ಲಿರುವ ಶಾಲೆಯೊಂದನ್ನು ಗುರಿಯಾಗಿರಿಸಿ ನಡೆಸಿದ ಗುಂಡಿನ ದಾಳಿಗೆ 18 ಶಾಲಾ ಮಕ್ಕಳು ಸೇರಿದಂತೆ 21 ಮಂದಿ ಸಾವಿಗೀಡಾಗಿದ್ದಾರೆ. ದಾಳಿಕೋರನ ವಯಸ್ಸು ಕೇವಲ 18 ಎಂಬುದೇ ಆತಂಕಕಾರಿ ಸಂಗತಿ. ದಾಳಿ ಮಾಡುವ ಮುನ್ನ ಆತ ಇನ್ಸ್ಟಾಗ್ರಾಂನಲ್ಲಿ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿರುವುದು ಬೆಳಕಿಗೆ ಬಂದಿದೆ.
ದಾಳಿಕೋರನ ಹೆಸರು ಸಾಲ್ವಡೋರ್ ರಾಮೋಸ್, ದಾಳಿ ನಡೆಸುವ ಕೆಲವು ದಿನಗಳ ಮೊದಲೇ ಆತ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರೈಫಲ್‌ಗಳು ಮತ್ತು ಮದ್ದುಗುಂಡುಗಳ ಚಿತ್ರಗಳನ್ನು ಪೋಸ್ಟ್ ಮಾಡಿದ್ದ. ಆತ ದಾಳಿಕೋರ ಎಂದು ಗೊತ್ತಾದಾಗಲೇ ಆತನ ಖಾತೆಯನ್ನು ಇನ್ಸ್ಟಾಗ್ರಾಂನಿಂದ ಡಿಲೀಟ್ ಮಾಡಲಾಗಿದೆ. ಬಹುಶಃ ಘಟನೆಯ ಬಗ್ಗೆ ಆತ ಮೊದಲೇ ಸುಳಿವು ನೀಡಿದ್ದ ಎನ್ನಲಾಗಿದೆ. ಒಂದು ವೇಳೆ ಫೋಟೋಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ್ದರೆ ಈ ಭೀಕರ ಘಟನೆ ನಡೆಯುತ್ತಿರಲಿಲ್ಲವೇನೋ ಎಂಬ ಮಾತುಗಳು ಕೇಳಿಬರುತ್ತಿದೆ.
ಈ ಸುದ್ದಿಯನ್ನು ಇನ್‌ಸ್ಟಾಗ್ರಾಮ್‌ನ ಮೂಲ ಕಂಪನಿಯಾದ ಮೆಟಾದ ವಕ್ತಾರರು ಈ ಖಚಿತಪಡಿಸಿದ್ದಾರೆ. ಇಡೀ ಪ್ರಕರಣದ ಬಗ್ಗೆ ವಿವರವಾದ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ದಾಳಿಕೋರನ ಉದ್ದೇಶ, ಬಳಸಿದ ಶಸ್ತ್ರಾಸ್ತ್ರಗಳ ವಿಧಗಳು, ಅವುಗಳನ್ನು ಹೊಂದಲು ಆತನಿಗಿದ್ದ ಕಾನೂನಿನ ಅಧಿಕಾರ ಮತ್ತು ಸಮಗ್ರ ಅಪರಾಧ ದೃಶ್ಯವನ್ನು ತನಿಖಾಧಿಕಾರಿಗಳು ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಟೆಕ್ಸಾಸ್ ಗವರ್ನರ್ ಗ್ರೆಗ್ ಅಬಾಟ್ ಅವರು ಹೇಳಿದ್ದಾರೆ.
ಆಗಿದ್ದೇನು?
ಟೆಕ್ಸಾಸ್ನ ಉವಾಲ್ದೆ ಕೌಂಟಿಯಲ್ಲಿರುವ ಪ್ರಾಥಮಿಕ ಶಾಲಾ ಆವರಣದ ಒಳಗೆ ದಾಳಿಕೋರ ಸಾಲ್ವಡೋರ್ ರಾಮೋಸ್, ಮಂಗಳವಾರ ಮನಂಬದಂತೆ ಗುಂಡಿನ ಮಳೆಗೆರೆದಿದ್ದಾನೆ. ಮೃತಪಟ್ಟವರಲ್ಲಿ 18 ಶಾಲಾ ಮಕ್ಕಳು ಹಾಗೂ ಮೂವರು ವಯಸ್ಕರಾಗಿದ್ದಾರೆ. ಗುಂಡಿನ ದಾಳಿಯ ವೇಳೆಯೇ ಪೊಲೀಸರು ರಾಮೋಸ್ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ.
ಯುಎಸ್ ಶಾಲೆಯೊಂದರಲ್ಲಿ ಸುಮಾರು ಒಂದು ದಶಕದ ಬಳಿಕ ನಡೆದ ಅತ್ಯಂತ ಭೀಕರ ಗುಂಡಿನ ದಾಳಿ ಇದಾಗಿದೆ ಮತ್ತು ಟೆಕ್ಸಾಸ್ ಇತಿಹಾಸದಲ್ಲೇ ಅತ್ಯಂತ ಮಾರಣಾಂತಿಕ ಶಾಲಾ ಗುಂಡಿನ ದಾಳಿಯಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಫೆಡರಲ್ ಕಾನೂನು ಜಾರಿ ಅಧಿಕಾರಿಗಳು ತಿಳಿಸಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ (ಎಪಿ) ತಿಳಿಸಿದೆ. (ಏಜೆನ್ಸೀಸ್)