ಕಾಬುಲ್​ ವಿಮಾನ ನಿಲ್ದಾಣದಲ್ಲಿ ಗೆಲುವಿನ ಘೋಷಣೆ: ಜಗತ್ತು ನಮ್ಮನ್ನು ನೋಡಿ ಕಲಿಯಬೇಕೆಂದ ತಾಲಿಬಾನ್​..!

Taliban
Published on

ಕಾಬುಲ್​: ಡೆಡ್​ಲೈನ್​ ಪ್ರಕಾರ ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆ ಖಾಲಿ ಮಾಡುತ್ತಿದ್ದಂತೆ ಮಂಗಳವಾರ ಬೆಳಗ್ಗೆ ಕಾಬುಲ್​ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಠಿ ನಡೆಸಿದ ತಾಲಿಬಾನ್​ ನಾಯಕರು ಈ ವಿಜಯೋತ್ಸವ ಎಲ್ಲ ಆಫ್ಘಾನ್ನರಿಗೂ ಸೇರಿದ್ದು ಎಂದು ಘೋಷಣೆ ಮಾಡಿದ್ದಾರೆ. ​

ಕಾಬುಲ್​ ವಿಮಾನ ನಿಲ್ದಾಣವನ್ನು ಅಮೆರಿಕ ಸೇನೆ ತೊರೆಯುತ್ತಿದ್ದಂತೆ ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಟ್ಟ ತಾಲಿಬಾನ್​ ನಾಯಕರು ಏರ್​ಪೋರ್ಟ್​ನ ರನ್​ವೇ ಸುತ್ತ ಸಾಂಕೇತಿಕವಾಗಿ ಒಟ್ಟಿಗೆ ಹೆಜ್ಜೆ ಹಾಕುವ ಮೂಲಕ ತಮ್ಮ ವಿಜಯೋತ್ಸವವನ್ನು ಆಚರಿಸಿದರು. ಇದಾದ ಬಳಿಕ ವಿಮಾನ ನಿಲ್ದಾಣದ ಎದುರು ಸುದ್ದಿಗಾರರೊಂದಿಗೆ ಮಾತನಾಡಿದ ತಾಲಿಬಾನ್​ ವಕ್ತಾರ, ಈ ಗೆಲವು ಆಫ್ಘಾನ್ನರಿಗೆ ಸೇರಿದ್ದು ಎಂದರು. ಈ ಸಂದರ್ಭದಲ್ಲಿ ಇತರೆ ತಾಲಿಬಾನ್​ ನಾಯಕರು ಅವರ ವಕ್ತಾರರ ಜತೆಯಲ್ಲಿದ್ದರು.

ತಾಲಿಬಾನ್​ ವಕ್ತಾರ ಜಬಿಹುಲ್ಲಾ ಮುಜಾಹಿದ್ ಮಾತನಾಡಿ, ಇಡೀ ಜಗತ್ತು ನಮ್ಮನ್ನು ನೋಡಿ ಕಲಿಯಬೇಕು ಎಂದರು ಮತ್ತು ಇದು ಗೆಲುವನ್ನು ಸಂಭ್ರಮಿಸುವ ಕ್ಷಣ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ತಾಲಿಬಾನಿಗಳು ತಮ್ಮ ಮೊಬೈಲ್​ಗಳಿಂದ ಖಾಲಿ ವಿಮಾನ ನಿಲ್ದಾಣವನ್ನು ಸರೆಹಿಡಿದುಕೊಂಡರು.

ಇತ್ತ ಅಮೆರಿಕ ಆಫ್ಘಾನ್​ ನೆಲ ತೊರೆಯುತ್ತಿದ್ದಂತೆ ತಾಲಿಬಾನಿಗಳನ್ನು ಉದ್ದೇಶಿಸಿ ಮಾತನಾಡಿರುವ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್, ಮಹಿಳೆಯರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಅಫ್ಘಾನ್ ಜನರ ಮೂಲಭೂತ ಹಕ್ಕುಗಳನ್ನು ಗೌರವಿಸುವ, ಅವರ ಸ್ವಾತಂತ್ರ್ಯ ಹಾಗೂ ಭಯೋತ್ಪಾದನೆ ವಿರುದ್ಧದ ಅವರ ಬದ್ಧತೆಗಳನ್ನು ಪೂರೈಸುವ ಮೂಲಕ ತಾಲಿಬಾನ್ ಅಂತಾರಾಷ್ಟ್ರೀಯ ಕಾನೂನುಬದ್ಧತೆ ಮತ್ತು ಬೆಂಬಲವನ್ನು ಗಳಿಸಬೇಕಾಗುತ್ತದೆ ಎಂದು ಹೇಳಿದರು.

ತಾಲಿಬಾನ್ ನೇತೃತ್ವದ ಸರ್ಕಾರವು ಏನು ಹೇಳುತ್ತದೆ ಎಂಬುದರ ಆಧಾರದ ಮೇಲೆ ಯುಎಸ್ ತಾಲಿಬಾನ್ ಜತೆ ತೊಡಗಿಸಿಕೊಳ್ಳುವುದಿಲ್ಲ, ಆದರೆ ಅದರ ಬದ್ಧತೆಗಳಿಗೆ ಅನುಗುಣವಾಗಿ ನಮ್ಮ ನಡೆಯು ಬದಲಾಗುತ್ತದೆ ಎಂದು ಬ್ಲಿಂಕನ್ ಹೇಳಿದರು.

ಸೋಮವಾರ ಮಧ್ಯರಾತ್ರಿ ಕಾಬುಲ್​ ವಿಮಾನ ನಿಲ್ದಾಣದಿಂದ ಸಂಪೂರ್ಣ ಅಮೆರಿಕ ಸೇನೆ ತವರಿಗೆ ಮರಳಿದ್ದು, 20 ವರ್ಷಗಳ ಸುದೀರ್ಘ ಸಂಘರ್ಷಕ್ಕೆ ಅಮೆರಿಕ ಅಂತ್ಯ ಹಾಡಿದೆ. ಇದೀಗ ಇಡೀ ಆಫ್ಘಾನ್​ ತಾಲಿಬಾನ್​ ಕೈವಶದಲ್ಲಿದ್ದು, ಮುಂದೆ ಸರ್ಕಾರ ರಚನೆ ಮಾಡಲಿದೆ. ಆದರೆ, ಅಲ್ಲಿನ ಜನರು ತಾಲಿಬಾನ್​ ಆಡಳಿತದಿಂದ ಈಗಲು ಭಯದಲ್ಲೇ ಬದುಕು ನಡೆಸುತ್ತಿದ್ದು, ಮತ್ತೊಂದು ಬದಲಾವಣೆ ಆಗಬಹುದು ಎಂಬ ಆಸೆ ಕಂಗಳಲ್ಲಿ ಕಾದು ಕುಳಿತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net