

ಇಸ್ಲಮಾಬಾದ್: ಲಾಹೋರ್ ಹೈಕೋರ್ಟ್ (ಎಲ್ಎಚ್ಸಿ)ನ ಮುಲ್ತಾನ್ ಪೀಠವು ಮಾಡೆಲ್ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್ ಖಂಡಿಲ್ ಬಲೂಚ್ (25) ಕೊಲೆ ಪ್ರಕರಣದಿಂದ ಆಕೆಯ ಸಹೋದರ ವಾಸಿಂ ಬಲೂಚ್ನನ್ನು ಖುಲಾಸೆಗೊಳಿಸಿದ್ದು, ಮೂರು ವರ್ಷಗಳ ಬಳಿಕ ವಾಸಿಂ ಜೈಲಿನಿಂದ ಬಿಡುಗಡೆಯಾಗಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡಿದ್ದಕ್ಕೆ ಕಿರಿಯ ಸಹೋದರಿ ಖಂಡಿಲ್ ಬಲೂಚ್ಳನ್ನು ಕೊಲೆ ಮಾಡಿದ್ದಾಗಿ 2016ರಲ್ಲಿ ವಾಸಿಂ ವಿಡಿಯೋ ರೆಕಾರ್ಡ್ ಮೂಲಕ ತಪ್ಪೊಪ್ಪಿಕೊಂಡಿದ್ದ. ತಂಗಿಯ ವರ್ತನೆಯಿಂದ ಕುಟುಂಬದ ಗೌರವ ಮಣ್ಣು ಪಾಲಾಗಿದ್ದರಿಂದ ಕೃತ್ಯ ಎಸಗಿದ್ದಾಗಿ ಹೇಳಿಕೊಂಡಿದ್ದ.
ಆರಂಭದಲ್ಲಿ ಪೊಲೀಸರು ಇದೊಂದು ಮರ್ಯಾದೆ ಹತ್ಯೆ ಎಂದು ನಂಬಿದ್ದರು. ನಂತರ ವಾಸಿಂ ನೀಡಿದ ಹೇಳಿಕೆಯಿಂದ ಮರ್ಯಾದೆ ಹತ್ಯೆ ಎಂಬುದು ನಿಜವವಾಯಿತು. ಖಂಡಿಲ್ ಬಲೂಚ್ಳ ನಿಜವಾದ ಹೆಸರು ಫೌಜಿಯಾ ಅಜೀಮ್. ಆದರೆ, ಮಾಡೆಲಿಂಗ್ಗೆ ಬಂದ ಮೇಲೆ ಆಕೆ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದಳು. ತನ್ನ ಫೋಟೋ ಮತ್ತು ವಿಡಿಯೋಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ವಿವಾದದ ಕೇಂದ್ರ ಬಿಂದುವಾಗಿದ್ದಳು.
ಖಂಡಿಲ್ ಬಲೂಚ್ಳನ್ನು ಕೊಂದ ಆರೋಪದ ಮೇಲೆ ತಪ್ಪೊಪ್ಪಿಕೊಂಡ ನಂತರವೂ ತಾನು ಎಸಗಿದ ಅಪರಾಧಕ್ಕೆ ಶಿಕ್ಷೆ ನೀಡಬಾರದೆಂದು ವಾಸಿಂ, ನ್ಯಾಯಾಲಯವನ್ನು ವಿನಂತಿಸಿದ್ದರು. ಆದರೂ 2019ರಲ್ಲಿ ಆತನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು. 2016ರಲ್ಲಿ ಖಂಡಿಲ್ಳನ್ನು ಉಸಿರುಗಟ್ಟಿಸಿ ವಾಸಿಂ ಕೊಲೆ ಮಾಡಿದ್ದ. ಅಲ್ಲದೆ, ತಂಗಿಯನ್ನು ಕೊಲೆ ಮಾಡಿದ್ದಕ್ಕೆ ಹೆಮ್ಮೆ ಪಡುತ್ತೇನೆಂದು ಹೇಳಿಕೊಂಡಿದ್ದ.
ಈ ಸಮಯದಲ್ಲಿ ಯಾರಾದರೂ ಕುಟುಂಬದ ಸದಸ್ಯರನ್ನು ಕೊಂದರೆ ಮತ್ತು ಇತರ ಕುಟುಂಬ ಸದಸ್ಯರು ಹತ್ಯೆಯನ್ನು ಬೆಂಬಲಿಸಿದರೆ ಆ ಪ್ರಕರಣದಲ್ಲಿ ಅವರಿಗೆ ಶಿಕ್ಷೆಯಾಗದಿರಲು ಕ್ಷಮೆಯಾಚಿಸಲು ಪಾಕಿಸ್ತಾನದ ಕಾನೂನು ಅನುವು ಮಾಡಿಕೊಟ್ಟಿತ್ತು.
ಇದೀಗ ಅಪರಾಧಿಯನ್ನು ಪಾಕ್ ನ್ಯಾಯಾಲಯ ಬಿಡುಗಡೆ ಮಾಡಿದ್ದು, ಪಾಕ್ನಲ್ಲಿ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ಪಾಕ್ ಕಾನೂನು ವಿಫಲವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. (ಏಜೆನ್ಸೀಸ್)