VIDEO| ಶಕ್ತಿಮಾನ್​ ಸ್ಟೈಲ್​ನಲ್ಲಿ ಸಾಹಸ ಮಾಡಲು ಹೋಗಿ ಜೈಲು ಪಾಲಾದ ಮೂವರು ಯುವಕರು!

Bike Stunt
Published on

ನವದೆಹಲಿ: ಸೋಶಿಯಲ್​ ಮೀಡಿಯಾ ಜಮಾನದಲ್ಲಿ ಫೇಮಸ್​ ಆಗಲೆಂದೇ ಸಾಕಷ್ಟು ಮಂದಿ ನಾನಾ ಸರ್ಕಸ್​ ಮಾಡುತ್ತಿರುತ್ತಾರೆ. ಕೆಲವರು ಏನೇನೋ ಮಾಡಲು ಹೋಗಿ ಕಾನೂನಿನ ನಿಯಮಗಳನ್ನು ಮುರಿದು ಜೈಲು ಅತಿಥಿಯಾದ ಉದಾಹರಣೆಗಳಿವೆ. ಆ ಸಾಲಿಗೆ ಮತ್ತೊಂದು ಘಟನೆ ಸೇರಿಕೊಂಡಿದೆ.

ದ್ವಿಚಕ್ರ ವಾಹನ ಬಳಸಿಕೊಂಡು ಅಪಾಯಕಾರಿ ಸಾಹಸ ಚಿತ್ರೀಕರಣ ನಡೆಸುತ್ತಿದ್ದ ಮೂವರು ಯುವಕರನ್ನು ನೋಯ್ಡಾ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕಾಲ್ಪನಿಕ ಸೂಪರ್ ಹೀರೋ ಶಕ್ತಿಮಾನ್​ ಸಾಹಸವನ್ನು ಮರುಸೃಷ್ಟಿಸಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್​ ಮಾಡಿದ್ದರು.

ಮೂವರು ಆರೋಪಿಗಳ ಬಂಧನದ ಜತೆಗೆ ಚಿತ್ರೀಕರಣಕ್ಕೆ ಬಳಸಿದ್ದ ಬೈಕ್​ ಅನ್ನು ಪೊಲೀಸರು ಸೀಜ್​ ಮಾಡಿದ್ದಾರೆ. ಬಂಧಿತರನ್ನು ವಿಕಾಸ್​, ಅನಿಲ್​ ಮತ್ತು ಮೆಹಕ್​ ಎಂದು ಗುರುತಿಸಲಾಗಿದೆ. ಸಾರ್ವಜನಿಕ ರಸ್ತೆಯಲ್ಲಿ ಜನರಿಗೆ ಕಿರಿಕಿರಿ ಉಂಟು ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.

ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಗೌತಮ್ ಬುದ್ಧನಗರದ ಪೊಲೀಸ್ ಕಮಿಷನರೇಟ್, "ವಿಕಾಸ್ ಎಂಬ ಯುವಕನೊಬ್ಬ ಬೈಕ್‌ನಲ್ಲಿ ಅಪಾಯಕಾರಿ ಸಾಹಸ ಮಾಡಿದ್ದಾನೆ ಮತ್ತು ಅದನ್ನು ವಿಡಿಯೋ ಮಾಡಿದ ಅವನ ಇಬ್ಬರು ಸಹಚರರನ್ನು (ಗೌರವ್, ಸೂರಜ್) ನೋಯ್ಡಾದ ಪೊಲೀಸ್ ಠಾಣೆ ಸೆಕ್ಟರ್-63ರ ಸಿಬ್ಬಂದಿ ಬಂಧಿಸಿದ್ದಾರೆ. ಸ್ಟಂಟ್‌ಗೆ ಬಳಸಿದ ಬೈಕನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.

ಬಂಧಿತ ಮೂವರು ಯುವಕರು ಗಾಜಿಯಾಬಾದ್ ನಿವಾಸಿಗಳು. ಕಳೆದ ಗುರುವಾರ ನೋಯ್ಡಾ ರಸ್ತೆಗಳಲ್ಲಿ ಸಾಹಸ ಪ್ರದರ್ಶನ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net