ಮರುಪರಿಶೀಲನೆ ಪೂರ್ಣಗೊಳ್ಳುವವರೆಗೂ ದೇಶದ್ರೋಹ ಕಾಯ್ದೆಗೆ ತಡೆ ನೀಡಿದ ಸುಪ್ರೀಂಕೋರ್ಟ್​

Supreme Court 13 Oct 20
Published on

ನವದೆಹಲಿ: ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 124ಎ (ದೇಶದ್ರೋಹ ಕಾನೂನು) ಮರುಪರಿಶೀಲಿಸುವ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಬೇರೆ ಬೇರೆ ರಾಜ್ಯದಲ್ಲಿ ದಾಖಲಾಗಿರುವ ದೇಶದ್ರೋಹ ಪ್ರಕರಣಗಳನ್ನು ತಡೆ ಹಿಡಿಯುವಂತೆ ಹಾಗೂ ಹೊಸ ಪ್ರಕರಣಗಳನ್ನು ದಾಖಲಿಸಿಕೊಳ್ಳದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್​ ಬುಧವಾರ​ ಸೂಚನೆ ನೀಡಿದೆ.

ಸದ್ಯ ದೇಶದ್ರೋಹ ಕಾಯ್ದೆ ಸುಪ್ರೀಂಕೋರ್ಟ್​ ತಡೆ ನೀಡಿದ್ದು, ಮರುಪರಿಶೀಲನೆ ಪೂರ್ಣಗೊಳ್ಳುವವರೆಗೂ ಸೆಕ್ಷನ್​ 124 ಎ ಬಳಸದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್-124 ರ ಅಡಿಯಲ್ಲಿರುವ ಕಾನೂನಿನ ಮರು ಪರಿಶೀಲನೆ ಪೂರ್ಣಗೊಳ್ಳುವವರೆಗೆ ಅದನ್ನು ಬಳಸಲಾಗುವುದಿಲ್ಲ ಎಂಬುದನ್ನು ನಿರೀಕ್ಷಿಸುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ ರಮಣ ನೇತೃತ್ವದ ಪೀಠ ಹೇಳಿದೆ. ಅಲ್ಲದೆ, ಈಗಾಗಲೇ ಸೆಕ್ಷನ್ 124ಎ ಐಪಿಸಿ ಪ್ರಕರಣದ ಅಡಿಯಲ್ಲಿ ಜೈಲಿನಲ್ಲಿರುವವರು ಸೂಕ್ತ ಪರಿಹಾರ ಮತ್ತು ಜಾಮೀನಿಗಾಗಿ ಸಕ್ಷಮ ನ್ಯಾಯಾಲಯಗಳನ್ನು ಸಂಪರ್ಕಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಇಂದು ಸುಪ್ರೀಂಕೋರ್ಟ್​ ಮುಂದೆ ವಾದ ಮಂಡಿಸಿದ ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ, ದೇಶದ್ರೋಹ ಪ್ರಕರಣದ ವಿಚಾರಣೆ ನಡೆಸುತ್ತಿರುವ ಕೇಂದ್ರವು, ಕಾನೂನಿನ ಮರುಪರಿಶೀಲನೆಗೆ ಕರಡನ್ನು ಸಿದ್ಧಪಡಿಸಿದೆ. ಪೊಲೀಸ್​ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿಯೊಬ್ಬರು ಸರಿಯಾದ ಕಾರಣವನ್ನು ಹೇಳಿದರೆ ಮಾತ್ರ ದೇಶದ್ರೋಹದ ಆರೋಪದೊಂದಿಗೆ ಎಫ್‌ಐಆರ್ ದಾಖಲಿಸಲಾಗುವುದು ಎಂಬುದನ್ನು ಕರಡು ಸೂಚಿಸುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಗುರುತಿಸಬಹುದಾದ ಅಪರಾಧವಿದ್ದಂತಹ ಸಂದರ್ಭದಲ್ಲಿ ಸಾಂವಿಧಾನಿಕ ನ್ಯಾಯಾಲಯವು ಆದೇಶಕ್ಕೆ ತಡೆ ನೀಡುವುದು ಸೂಕ್ತವಲ್ಲ. ನ್ಯಾಯಾಂಗ ಪ್ರಾಧಿಕಾರದ ಅಡಿಯಲ್ಲಿ ಜವಾಬ್ದಾರಿಯುತ ಹಿರಿಯ ಅಧಿಕಾರಿಯಿಂದ ಪರಿಶೀಲನೆ ನಡೆಸಲಿ ಎಂದರು. ಇದೀಗ ವಿಚಾರಣೆ ಹಂತದಲ್ಲಿರುವ ಪ್ರಕರಣಗಳಿಗೆ ಕೋರ್ಟ್​ ತಡೆ ನೀಡಿದ್ದು, ಈ ಬಗ್ಗೆ ಕಳವಳ ವ್ಯಕ್ತಪಡಿಸಿದ ತುಷಾರ್​ ಮೆಹ್ತಾ ಅವರು ಭಯೋತ್ಪಾದನೆ, ಅಕ್ರಮ ಹಣ ವರ್ಗಾವಣೆ ಅಥವಾ ಯಾವುದೇ ಇತರ ಅಪರಾಧ ಇರಬಹುದು ಈಗಾಗಾಲೇ ದಾಖಲಾಗಿರುವ ಪ್ರಕರಗಳು ತುಂಬಾ ಗಂಭೀರವಾದವು ಎಂದರು.

ಈಗಾಗಲೇ ದಾಖಲಾಗಿರುವ ಪ್ರಕರಣಗಳು ನ್ಯಾಯಾಂಗ ಅಧಿಕಾರಿಯ ಬಳಿ ಬಾಕಿ ಇವೆಯೇ ಹೊರತು ಪೊಲೀಸರ ಬಳಿಯಲ್ಲ. ಆರೋಪಿಗಳು ಜಾಮೀನು ಅರ್ಜಿಯನ್ನು ಸಲ್ಲಿಸಿದಾಗ ನ್ಯಾಯಾಲಯವು ಆ ಪ್ರಕ್ರಿಯೆಯನ್ನು ತ್ವರಿತಗೊಳಿಸಬಹುದು. ಆದರೆ ಕಾನೂನನ್ನು ತಡೆಹಿಡಿಯುವುದು ಸೂಕ್ತವಲ್ಲ ಎಂದು ಮೆಹ್ತಾ ಹೇಳಿದರು.

ಪ್ರಕರಣದ ಬಗ್ಗೆ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಎನ್​.ವಿ. ರಮಣ, ಭಾರತವು ವಸಾಹತುಶಾಹಿ ಆಳ್ವಿಕೆಯಲ್ಲಿದ್ದಾಗ ಸೆಕ್ಷನ್ 124 ಎ ಅನ್ನು ವಿಧಿಸಲಾಗಿತ್ತು ಎಂಬುದು ಈ ನ್ಯಾಯಾಲಯದ ಪ್ರಾಥಮಿಕ ಅಭಿಪ್ರಾಯವಾಗಿದೆ. ಕಾನೂನನ್ನು ಮರುಪರಿಶೀಲಿಸುವುದಾಗಿ ಮತ್ತು ಭಾರತದ ನಾಗರಿಕರ ನಾಗರಿಕ ಹಕ್ಕುಗಳನ್ನು ರಕ್ಷಿಸುವುದಾಗಿ ಕೇಂದ್ರ ಹೇಳಿದೆ. ಆದರೆ, ಕಾನೂನಿನ ದುರ್ಬಳಕೆ ಆಗುತ್ತಿದೆ. ಎಜಿ ಕೂಡ ಇಂತಹ ದುರ್ಬಳಕೆಯ ನಿದರ್ಶನಗಳನ್ನು ನೀಡಿದ್ದಾರೆ ಎಂದು ಹೇಳುವ ಮೂಲಕ ಸದ್ಯ ದೇಶದ್ರೋಹ ಕಾಯ್ದೆಗೆ ಸುಪ್ರೀಂಕೋರ್ಟ್​ ತಡೆ ನೀಡಿದ್ದು, ಮರುಪರಿಶೀಲನೆ ಪೂರ್ಣಗೊಳ್ಳುವವರೆಗೂ ಸೆಕ್ಷನ್​ 124 ಎ ಬಳಸದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net