ನಾಪತ್ತೆಯಾದ 11 ದಿನಗಳ ಬಳಿಕ ಕಾಡಿನಲ್ಲಿ ಶವವಾಗಿ ಪತ್ತೆಯಾದ ಸುಂದರಿ: ಅಷ್ಟಕ್ಕೂ ನಡೆದಿದ್ದೇನು?

Russia Influencer
Published on

ಮಾಸ್ಕೋ: ಬ್ಯೂಟಿ ಮತ್ತು ಲೈಫ್​ಸ್ಟೈಲ್​ ಪ್ರಭಾವಿ ಮಹಿಳೆಯೊಬ್ಬಳ ಶವ ಆಕೆ ಕಾಣೆಯಾದ 11 ದಿನಗಳ ಬಳಿಕ ಅರಣ್ಯ ಪ್ರದೇಶವೊಂದರಲ್ಲಿ ಪತ್ತೆಯಾಗಿರುವ ಘಟನೆ ರಷ್ಯಾದಲ್ಲಿ ನಡೆದಿದೆ.

ಮೃತಳನ್ನು ಕ್ರಿಶ್ಚಿನಾ ಜುರಾವ್ಲೆವಾ (28) ಎಂದು ಗುರುತಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯಳಾಗಿರುತ್ತಿದ್ದ ಕ್ರಿಶ್ಚಿನಾ, ತನ್ನ ಪತಿಯೊಂದಿಗೆ ಪೋಸ್​ ನೀಡಿದ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಳು. ಇದೀಗ ಆಕೆಯ ಗಂಡನನ್ನೇ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ಕೊಲೆಯಾಗಿರುವ ಸಂಶಯದ ಮೇಲೆ ತನಿಖೆ ಆರಂಭಿಸಿದ್ದಾರೆ.

ರಷ್ಯಾದ ಯೆಕಟೆರಿನ್‌ಬರ್ಗ್‌ನ ಆಗ್ನೇಯ ದಿಕ್ಕಿನ 15 ಮೈಲಿ ದೂರದಲ್ಲಿ ಅರಾಮಿಲ್​ ಬಳಿ ಕ್ರಿಶ್ಚಿನಾ ಮೃತದೇಹ ಪತ್ತೆಯಾಗಿದೆ. ಪ್ರಕೃತಿ ಕರೆ ಹಿನ್ನೆಲೆಯಲ್ಲಿ ರಸ್ತೆ ಸಮೀಪದಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ತಮ್ಮ ವಾಹನ ನಿಲ್ಲಿಸಿ ಮರವೊಂದರ ಬಳಿ ತೆರಳಿದಾಗ ಕ್ರಶ್ಚಿನಾ ದೇಹ ಪತ್ತೆಯಾಗಿದೆ.

ಪತ್ನಿ ಕಾಣೆ ಆಗಿರುವ ಬಗ್ಗೆ ಪತಿ ದೂರು ನೀಡಿದ್ದ. ಇದಾದ ಬಳಿಕ ಆಕೆಯ ಪತ್ತೆಗೆ ಸಾಕಷ್ಟು ಹುಡುಕಾಟ ನಡೆಸಿದ ಬಳಿಕವೂ ಶವ ಸಿಗದಿದ್ದಾಗ ಪತಿಯ ಮೇಲೆ ಅನುಮಾನ ಬಂದು ಆತನನ್ನು ವಶಕ್ಕೆ ಪಡೆಯಲಾಗಿತ್ತು. ಕ್ರಶ್ಚಿನಾ ತಾನೂ ಏಕಾಂಗಿ ಆಗಿರುವುದಕ್ಕೆ ತನ್ನನ್ನು ಬಿಟ್ಟು ಮಾಸ್ಕೋಗೆ ಹೋಗಿದ್ದಾಗಿ ಪತಿ ತನ್ನ ಸ್ನೇಹಿತರೊಂದಿಗೆ ಹೇಳಿಕೊಂಡಿದ್ದ. ಇದು ಪೊಲೀಸರ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿತು.

ಈ ನಡುವೆ ಒಂದು ಸಿದ್ಧಾಂತದ ಪ್ರಕಾರ ಕ್ರಿಶ್ಚಿನಾಗೆ ಬಲವಂತವಾಗಿ ಡ್ರಗ್ಸ್​ ನೀಡಿ ಕೊಲೆ ಮಾಡಲಾಗಿದೆ ಎಂಬ ಅನುಮಾನ ಮೂಡಿದೆ. ಮಾಜಿ ಶಿಕ್ಷಕಿ ಆಗಿರುವ ಆಕೆ ಸಾವಿರಾರು ಚಂದಾದಾರರನ್ನು ಹೊಂದಿದ್ದ ಸಾಮಾಜಿಕ ಜಾಲತಾಣವನ್ನು ನಡೆಸುತ್ತಿದ್ದರು.

ಇದೀಗ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ರಷ್ಯಾ ಪೊಲೀಸರು ಮರಣೋತ್ತರ ಪರೀಕ್ಷೆ, ವಿಧಿವಿಜ್ಞಾನ ಪರೀಕ್ಷೆ ಮತ್ತು ವಿಚಾರಣೆ ಮುಂತಾದವುಗಳನ್ನು ಕೈಗೊಂಡಿದ್ದಾರೆ. ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಕ್ರಿಶ್ಚಿನಾ ಸ್ನೇಹಿತೆ ಎಲೆನಾ ಮಖಲಿನಾ ಮಾತನಾಡಿ, ಕ್ರಿಶ್ಚಿನಾ ತನ್ನನ್ನು ಬಿಟ್ಟು ಹೋದಳಿಂದ ಆಕೆಯ ಪತಿ ಬಹಳ ಶಾಂತವಾಗಿ ಹೇಳಿದನು. ಆತನ ಮುಖದಲ್ಲಿ ಯಾವುದೇ ನೋವು ಸಹ ಇರಲಿಲ್ಲ ಎಂದಿದ್ದಾರೆ. ಇನ್ನು ದಂಪತಿ ನಡುವೆ ಎಂದಿಗೂ ಜಗಳ ನಡೆದಿಲ್ಲ. ಚೆನ್ನಾಗಿಯೇ ಇದ್ದರು ಎಂದು ನೆರೆ ಮನೆಯವರು ಹೇಳಿದ್ದಾರೆ.

ಇಂತಹ ವ್ಯಕ್ತಿಯನ್ನು ಮದುವೆಯಾಗಿದ್ದೆ ನನ್ನ ಜೀವನದ ಒಳ್ಳೆಯ ನಿರ್ಧಾರ ಎಂದು ಕ್ರಿಶ್ಚಿನಾ ಹೇಳಿಕೊಂಡಿದ್ದಳಂತೆ. ಅಲ್ಲದೆ, ಗಂಡನೊಂದಿಗಿರುವ ಫೋಟೋವನ್ನು ದಿನನಿತ್ಯ ಪೋಸ್ಟ್​ ಮಾಡುತ್ತಿದ್ದಳು. ಇದೀಗ ಪ್ರಕರಣದ ಮೇಲೆ ಪೊಲೀಸರು ತುಂಬಾ ತಲೆ ಕೊಡಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net