

ಮಾಸ್ಕೋ: ಯೂಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡುವ ಮುನ್ನ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರಿಗೆ ಕರೆ ಮಾಡಿ ಯೂಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆ ಮಾಡುವುದಾಗಿ ತಿಳಿಸಿದರು ಎಂದು ಲುಕಾಶೆಂಕೊ ಅವರ ಕಚೇರಿ ತಿಳಿಸಿದೆ.
ಇಂದು ಬೆಳಗ್ಗೆ ಸುಮಾರು 5 ಗಂಟೆ (0200 ಜಿಎಮ್ಟಿ)ಗೆ ಬೆಲಾರಸ್ ಮತ್ತು ರಷ್ಯಾ ಅಧ್ಯಕ್ಷರ ನಡುವೆ ಮಾತುಕತೆ ನಡೆದಿದೆ. ಈ ವೇಳೆ ಯೂಕ್ರೇನ್ ಮತ್ತು ಡೊಂಬಾಸ್ ಗಡಿಯಲ್ಲಿನ ಪರಿಸ್ಥಿತಿಯ ಬಗ್ಗೆ ಪುತಿನ್ ಅವರು ಅಲೆಕ್ಸಾಂಡರ್ ಲುಕಾಶೆಂಕೊ ಅವರಿಗೆ ತಿಳಿಸಿದರು ಎಂದು ಅವರ ಕಚೇರಿ ಹೇಳಿದೆ.
ಬೆಲಾರಸ್ ಅಧ್ಯಕ್ಷರಿಗೆ ಕರೆ ಮಾಡಿದ್ದರ ಬಗ್ಗೆ ರಷ್ಯಾ ಅಧ್ಯಕ್ಷರ ಕಚೇರಿಯಿಂದ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಇಂದು ಬೆಳಗ್ಗೆ ದಿಢೀರನೇ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರಷ್ಯಾ ಅಧ್ಯಕ್ಷ ಯೂಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿದರು. ಇದಾದ ಬೆನ್ನಲ್ಲೇ ರಷ್ಯಾ ಮತ್ತು ಬೆಲಾರಸ್‌ನ ಉತ್ತರದ ಗಡಿಯಲ್ಲಿ ದೇಶವು ಫಿರಂಗಿ ದಾಳಿಗೆ ಒಳಗಾಗುತ್ತಿದೆ ಎಂದು ಉಕ್ರೇನ್‌ನ ಪಡೆಗಳು ಗುರುವಾರ ಬೆಳಗ್ಗೆ ಮಾಹಿತಿ ನೀಡಿತು.
ಯೂಕ್ರೇನ್ ವಿರುದ್ಧ ಯುದ್ಧ ಘೋಷಿಸಿ ಮಾತನಾಡಿದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಯೂಕ್ರೇನ್ ಅನ್ನು ವಶಪಡಿಸಿಕೊಳ್ಳುವುದು ನಮ್ಮ ಉದ್ದೇಶವಲ್ಲ. ಈ ಸೇನಾ ಕಾರ್ಯಾಚರಣೆಯು ಯೂಕ್ರೇನ್ ಅನ್ನು ಸೈನ್ಯೀಕರಣಗೊಳಿಸಲು ಪ್ರಯತ್ನಿಸುತ್ತದೆ ಮತ್ತು ಯೂಕ್ರೇನ್ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಬಂದಿದೆ ಎಂದು ಹೇಳಿದ್ದಾರೆ.
ರಷ್ಯಾ ಮತ್ತು ಯೂಕ್ರೇನಿಯನ್ ಪಡೆಗಳ ನಡುವಿನ ಘರ್ಷಣೆಗಳು ಸದ್ಯ ಅನಿವಾರ್ಯ ಎಂದಿರುವ ಪುತಿನ್, ಯೂಕ್ರೇನಿಯನ್ ಸೇವಾ ಸದಸ್ಯರಿಗೆ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮನೆಗೆ ಹೋಗುವಂತೆ ಕರೆ ನೀಡಿದ್ದಾರೆ. ಈ ವಿಚಾರದಲ್ಲಿ ಹೊರಗಿನಿಂದ ಹಸ್ತಕ್ಷೇಪ ಮಾಡುವವರಿಗೂ ಎಚ್ಚರಿಕೆಯ ಸಂದೇಶವನ್ನು ಪುತಿನ್ ರವಾನಿಸಿದ್ದಾರೆ. ಯಾರಾದರೂ ಹಸ್ತಕ್ಷೇಪ ಮಾಡಿದರೆ, ಇತಿಹಾಸದಲ್ಲೇ ಎಂದಿಗೂ ಎದುರಿಸದ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಈ ಸಂಬಂಧಿತ ಎಲ್ಲ ನಿರ್ಧಾರಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ. ನಾನು ಹೇಳುವುದನ್ನು ನೀವು ಕೇಳುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಯೂಕ್ರೇನ್ ನ್ಯಾಟೋಗೆ ಸೇರುವುದನ್ನು ತಡೆಯಲು ಮತ್ತು ಮಾಸ್ಕೋ ಭದ್ರತಾ ಖಾತರಿಗಳನ್ನು ನೀಡುವ ರಷ್ಯಾದ ಬೇಡಿಕೆಯನ್ನು ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು ನಿರ್ಲಕ್ಷಿಸುತ್ತಿವೆ ಎಂದು ಪುತಿನ್ ಆರೋಪ ಮಾಡಿದ್ದಾರೆ. (ಏಜೆನ್ಸೀಸ್)